ನವದೆಹಲಿ, ಫೆ 15 (DaijiworldNews/MS): ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ಗಮನ ಸೆಳಯಲು ರೈತರು ಹಮ್ಮಿಕೊಂಡಿರುವ ದೆಹಲಿ ಚಲೋ ಪ್ರತಿಭಟನೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಅಂಬಾಲಾ ಬಳಿಯ ಶಂಭು ಗಡಿ ಬಿಂದುವಿನಲ್ಲಿ, ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಒತ್ತಾಯಿಸುತ್ತಿರುವ ಪ್ರತಿಭಟನಾಕಾರರ ಮೇಲೆ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್ಗಳನ್ನು ಬಿಡುಗಡೆ ಮಾಡಲು ಡ್ರೋನ್ ಟಿಯರ್ ಸ್ಮೋಕ್ ಲಾಂಚರ್ಗಳನ್ನು ಬಳಸಿದರು. ಕೆಲವು ಪ್ರತಿಭಟನಾಕಾರರಿಂದ ಭದ್ರತಾ ಪಡೆಗಳು ಕಲ್ಲು ತೂರಾಟವನ್ನು ಎದುರಿಸಿದವು.
ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮೂವರು ಕೇಂದ್ರ ಸಚಿವರು ಚಂಡೀಗಢದಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಾಗಿ ರೈತ ಮುಖಂಡರನ್ನು ಭೇಟಿಯಾಗಲಿದ್ದಾರೆ.
ಮೊನ್ನೆ ಮಂಗಳವಾರ ಬೆಳಗ್ಗೆ ಪಂಜಾಬ್ನ ರೈತರು ರಾಷ್ಟ್ರ ರಾಜಧಾನಿ ಕಡೆಗೆ ತಮ್ಮ 'ದೆಹಲಿ ಚಲೋ' ಮೆರವಣಿಗೆಯನ್ನು ಪ್ರಾರಂಭಿಸಿದಾಗಿನಿಂದ, ಭದ್ರತಾ ಸಿಬ್ಬಂದಿಯೊಂದಿಗೆ ಪದೇ ಪದೇ ಘರ್ಷಣೆಗಳು ನಡೆಯುತ್ತಿದ್ದು, ಹಲವು ಭದ್ರತಾಪಡೆಯ ಸಿಬ್ಬಂದಿಗಳು ಹಾಗೂ ರೈತರು ಗಾಯಗೊಂಡಿದ್ದಾರೆ.