ಬೆಂಗಳೂರು, ಏ 26 (Daijiworld News/SM): ಪಾಕಿಸ್ತಾನದಿಂದ ಬಂದು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ತಕ್ಷಣ ಗಡಿಪಾರು ಮಾಡುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. 2017ರಲ್ಲಿ ಇಬ್ಬರು ಅಕ್ರಮವಾಗಿ ನೆಲೆಸಿದವರನ್ನು ಪೊಲೀಸರು ಬಂಧಿಸಿದ್ದರು.
ಅಕ್ರಮವಾಗಿ ಬಂದು ಇಲ್ಲಿ ನೆಲೆಸಿ ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನದ ಪ್ರಜೆಗಳು ನಮ್ಮ ದೇಶದಲ್ಲಿ ಇರಕೂಡದು. 24 ಗಂಟೆಯೊಳಗೆ ಅವರನ್ನು ಗಡಿಪಾರು ಮಾಡಿ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. 24 ಗಂಟೆಯೊಳಗೆ ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸುವುದು ಕಷ್ಟ. ಆದ್ದರಿಂದ ಸಮಯಾವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರದ ಪರ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಕೋರ್ಟ್ 10 ದಿನಗಳ ಕಾಲಾವಕಾಶವನ್ನು ನೀಡಿದೆ. ಹಾಗೂ ಮೇ 5ರೊಳಗೆ ಗಡಿಪಾರಿಗೆ ಸೂಚನೆ ನೀಡಿದೆ.