ಪೂಂಚ್, ಫೆ 15 (DaijiworldNews/SK): ಕಾಂಗ್ರೆಸ್ ಪಕ್ಷದಲ್ಲಿರುವ ಕೆಲವರ ದುರಹಂಕಾರ ಮತ್ತು ದೌರ್ಬಲ್ಯದಿಂದಾಗಿ ಪಕ್ಷವು ಅಂತ್ಯ ಕಾಣುತ್ತಿದೆ ಎಂದು ಗುಲಾಂ ನಬಿ ಆಜಾದ್ ವ್ಯಂಗ್ಯವಾಡಿದ್ದಾರೆ.
ಅಶೋಕ್ ಚೌಹಾಣ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಗುಲಾಂ ನಬಿ ಆಜಾದ್ ಅವರು, ನಾನು ಕಾಂಗ್ರೆಸ್ ಪಕ್ಷದ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ಏಕೆಂದರೆ ನಾನು ಈಗಾಗಲೇ ಆ ಪಕ್ಷವನ್ನು ತೊರೆದು ಬಹಳ ಕಾಲವಾಗಿದೆ. ಈಗ ಅವರುಂಟು, ಅವರ ಕೆಲಸಗಳುಂಟು ಎಂದಿದ್ದಾರೆ.
ಆದರೆ ಅಶೋಕ್ ಚೌಹಾಣ್ ಅವರು ಕಾಂಗ್ರೆಸ್ ಪಕ್ಷಕ್ಕೆ ಅಪಾರ ಕೊಡುಗೆ ನೀಡಿದವರು. ಅವರ ತಂದೆ ಕೂಡ ಕಾಂಗ್ರೆಸ್ ಪಕ್ಷದ ಅತಿ ದೊಡ್ಡ ನಾಯಕರಾಗಿದ್ದರು. ಕೇಂದ್ರ ಸಚಿವರೂ ಆಗಿದ್ದರು. ಇದೀಗ ಅಶೋಕ್ ಚೌಹಾಣ್ ಪಕ್ಷ ತೊರೆದ ಹಿನ್ನೆಲೆಯಲ್ಲಿ ಹಲವು ಕಾಂಗ್ರೆಸ್ ನಾಯಕರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ ಅನ್ನೋ ಮಾಹಿತಿ ನನಗೆ ಸಿಕ್ಕಿದೆ. ಇದು ಮುಂದಿನ ದಿನಗಳಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ದೊಡ್ಡ ಹೊಡೆತ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.