ಬಿಹಾರ, ಫೆ 16 (DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಪ್ರತಿಯೊಬ್ಬ ಅಭ್ಯರ್ಥಿಯ ಕನಸಾಗಿರುತ್ತದೆ. ಆದರೆ ಒಂದು ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುಂಡರೆ ಮರು ಯತ್ನಿಸುವ ಗೋಚಿಗೆ ಹೋಗುವುದಿಲ್ಲ. ಆದರೆ ಇಲ್ಲೊಬ್ಬರು ಪರೀಕ್ಷೆಯಲ್ಲಿ ಒಂದು ಬಾರಿ ಸೋಲುಂಡರು ಮರು ಪರೀಕ್ಷೆ ಬರೆದು ಎರಡನೇ ಪ್ರಯತ್ನದಲ್ಲಿ 2ನೇ ಅಖಿಲ ಭಾರತ ರ್ಯಾಂಕ್ ಗಳಿಸುದ ಗರಿಮಾ ಲೋಹಿಯಾ ಯಶೋಗಾಥೆ.
ಮೂಲತಃ ಬಿಹಾರದ ಬಕ್ಸಾರ್ನ ಗರಿಮಾ ಲೋಹಿಯಾ ಅವರು ವ್ಯಾಪಾರ ಹಿನ್ನಲೆಯುಳ್ಳ ಕುಟುಂಬದಲ್ಲಿ ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣದ ಬಳಿಕ ದೆಹಲಿ ವಿಶ್ವವಿದ್ಯಾನಿಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಪಡೆದರು.
ಬ್ಯಾಲದಿಂದಲೂ ಐಎಎಸ್ ಅಧಿಕಾರಿಯಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ದ ಗರಿಮಾ ಲೋಹಿಯಾ ಅವರು ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾದರು. ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಲು ಮುಂದಾದ ಗರಿಮಾ ಅವರು ಯಾವುದೇ ತರಬೇತಿ ಕೇಂದ್ರಗಳಿಗೆ ಸೇರದೇ ಸ್ವಯಂ ಅಧ್ಯಯನ, ಯೂಟ್ಯೂಬ್ ನೋಡುವುದು ಸೇರಿದಂತೆ ಲಭ್ಯವಿರುವ ಇಂಟರ್ನೆಟ್ ಸಂಪನ್ಮೂಲಗಳ ಹೆಚ್ಚಿನದನ್ನು ಮಾಡುವ ಮೂಲಕ ಪರೀಕ್ಷೆಗೆ ಸಿದ್ದತೆಯನ್ನು ನಡೆಸುತ್ತಿದ್ದರು.
ಆದರೆ ಇದರ ನಡುವೆ ಗರಿಮಾ ಅವರಿಗೆ ಆಧಾರಸ್ತಂಭವಾಗಿದ್ದ ಅವರ ತಂದೆ 2015 ರಲ್ಲಿ ನಿಧನರಾದರು. ತಂದೆಯ ನಿಧನವು ಗರಿಮಾ ಮತ್ತು ಅವರ ಇಡೀ ಕುಟುಂಬಕ್ಕೆ ದೊಡ್ಡ ಹಿನ್ನಡೆಯಾಯಿತು. ಆದರೆ ಗರಿಮಾ ಅವರ ಕುಟುಂಬದ ಸದಸ್ಯರು ಮತ್ತು ಒಡಹುಟ್ಟಿದವರ ನಿರಂತರ ಬೆಂಬಲದೊಂದಿಗೆ, ಮತ್ತೆ ಅವರು ಅಧ್ಯಯನದತ್ತ ಗಮನ ಹರಿಸಲು ಸಹಕಾರಿಯಾಯಿತು.
ಇನ್ನು ಕೋವಿಡ್-19 ರಾಷ್ಟ್ರವನ್ನು ಸಂಪೂರ್ಣ ಸ್ಥಗಿತಗೊಳಿಸಿದ ಸಮಯದಲ್ಲಿ ಗರಿಮಾ ಲೋಹಿಯಾ ತನ್ನನ್ನು ಸಂಪೂರ್ಣವಾಗಿ ಸ್ವಯಂ ಅಧ್ಯಯನಕ್ಕೆ ಸಮರ್ಪಿಸಿಕೊಂಡರು. ಆದರೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ತಯಾರಾದ ಗರಿಮಾ ಅವರಿಗೆ 2021 ರ ಆರಂಭಿಕ ಪ್ರಯತ್ನದಲ್ಲಿ ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಆದರೆ ಯಾವುದೇ ಹಿನ್ನಡೆಗೆ ತಲೆ ಕೆಡಿಸಿಕೊಳ್ಳದೇ ಮತ್ತೆ ತಮ್ಮ ತಯಾರಿಯನ್ನು ಮುಂದುವರಿಸಿದ ಗರಿಮಾ ಅವರು ಅಧ್ಯಯನದ ಅವಧಿಯನ್ನು ಹೆಚ್ಚಿಸುವುದರ ಜೊತೆಗೆ ಪ್ರತಿದಿನ ಸುಮಾರು 12 ಗಂಟೆಗಳ ಕಾಲ ಅಧ್ಯಯನ ಮಾಡಲು ಪ್ರಾರಂಭಿಸಿದರು.
ಇನ್ನು ಎರಡನೇ ಬಾರಿ ಪರೀಕ್ಷೆ ಬರೆಯಲು ಸಿದ್ದರಾದ ಗರಿಮಾ ಲೋಹಿಯಾ ತನ್ನ ಎರಡನೇ ಪ್ರಯತ್ನದಲ್ಲಿ 2ನೇ ಅಖಿಲ ಭಾರತ ರ್ಯಾಂಕ್ ಗಳಿಸುವ ಮೂಲಕ ಯಶಸ್ಸನ್ನು ಸಾಧಿಸಿದರು. ಈ ಮೂಲಕ ಅದೆಷ್ಟೋ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ.