ಉಳ್ಳಾಲ, ಏ 26 (Daijiworld News/SM): ಉಗ್ರರ ಕೃತ್ಯವನ್ನು ವಿಶ್ವವೇ ಖಂಡಿಸುತ್ತದೆ. ಕರ್ನಾಟಕದ 10 ಸೇರಿದಂತೆ ಜಿಲ್ಲೆಯ ಒಬ್ಬರು ಮಹಿಳೆ ಸಾವನ್ನಪ್ಪಿರುವುದು ತೀರಾ ದು:ಖಕರ, ಮೃತರ ಆತ್ಮಕ್ಕೆ ಶಾಂತಿಯನ್ನು ಒದಗಿಸಲು ಎಲ್ಲರೂ ಪ್ರಾರ್ಥಿಸುವುದಾಗಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ ಹೇಳಿದರು.
ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಚರ್ಚ್ ದಾಳಿ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಮತ್ತು ಯುವ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಶುಕ್ರವಾರ ಜರಗಿದ ಬೃಹತ್ ಸಂತಾಪ ಮತ್ತು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್ ಮಾತನಾಡಿ, ಉಗ್ರರ ಹೀನಾಯ ಕೃತ್ಯದಿಂದ ಆಗುತ್ತಿರುವ ಪರಿಸ್ಥಿತಿಯನ್ನು ವಿಶ್ವದಾದ್ಯಂತ ವಿವಿಧ ದೇಶಗಳು ಒಗ್ಗೂಡಿ ಪರಿಹರಿಸಬೇಕಿದೆ. ಮೃತರ ಕುಟುಂಬಗಳಿಗೆ ದು:ಖ ಸಹಿಸುವ ಶಕ್ತಿ ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.