ಬೆಂಗಳೂರು, ಎ27(Daijiworld News/SS): ಕಾಂಗ್ರೆಸ್ - ಜೆಡಿಎಸ್ನಲ್ಲಿ ಗೊಂದಲ ತಾರಕಕ್ಕೇರಿದೆ. ಫಲಿತಾಂಶದ ಬಳಿಕ ಇನ್ನಷ್ಟು ಉಲ್ಬಣಗೊಳ್ಳಲಿದೆ. ಹೀಗಾಗಿ ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗೆಲ್ಲಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪಕ್ಷದ ನಾಯಕರು ಕುಂದಗೋಳ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಪ್ರತಿ ಮತಗಟ್ಟೆಯಲ್ಲಿ, ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಕೆಲವರಿಗೆ ಜವಾಬ್ದಾರಿ ಹೊರಿಸಿದ್ದು, ನನ್ನ ಹೆಸರಿಲ್ಲ ಎಂದು ಸುಮ್ಮನೆ ಕೂರುವಂತಿಲ್ಲ. ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮೇ 23ರ ಬಳಿಕ ಎಲ್ಲಿಗೆ ಹೋದರೂ ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಚಿಂಚೋಳಿ ಹಾಗೂ ಕುಂದಗೋಳ, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣವಿದೆ. ಲೋಕಸಭಾ ಚುನಾವಣೆಯನ್ನು ಎದುರಿಸಿದ ಉತ್ಸಾಹ, ರಣತಂತ್ರದೊಂದಿಗೆ ಈ ಉಪಚುನಾವಣೆಯನ್ನೂ ಎದುರಿಸಬೇಕು. ಎರಡು ಉಪಚುನಾವಣೆಗಳನ್ನು ಗೆಲ್ಲುವವರೆಗೆ ಯಾರಿಗೂ ವಿಶ್ರಾಂತಿ ಇಲ್ಲ. ಹಾಗಾಗಿ ಎಲ್ಲರೂ ಉಪಚುನಾವಣೆಗೆ ಸಮಯ ಕೊಟ್ಟು ಕೆಲಸ ಮಾಡಬೇಕು. ಯಾರು, ಯಾವ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಬೇಕು ಎಂಬುದನ್ನು ನೀವೇ ನಿರ್ಧರಿಸಿ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಈ ಬಾರಿ ಸೋಲುವುದು ಖಚಿತ. ಯುವಜನತೆ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು, ಎಲ್ಲ ವರ್ಗದ ಜನ ಒಂದಾಗಿ ನರೇಂದ್ರ ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ. ಮೋದಿಯವರು ಪ್ರಚಾರ ನಡೆಸಿದ ಕ್ಷೇತ್ರ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರೋಡ್ ಶೋ ನಡೆಸಿದ ಕಡೆಯೆಲ್ಲಾ ಜನ ಭರ್ಜರಿ ಸ್ವಾಗತ ನೀಡಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲೂ 22 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿಯವರು ಈಗಾಗಲೇ ನಮ್ಮ ಅಭ್ಯರ್ಥಿ ವಿರುದ್ಧ ಸೋತಾಗಿದೆ. ಕೋಲಾರದಲ್ಲೂ ಕೆ.ಎಚ್.ಮುನಿಯಪ್ಪ ನಮ್ಮ ಅಭ್ಯರ್ಥಿ ಮುನಿಸ್ವಾಮಿ ವಿರುದ್ಧ ಸೋಲುವುದು ನಿಶ್ಚಿತ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಶೇ.100ರಷ್ಟು ಸೋಲಲಿದ್ದಾರೆ. ತುಮಕೂರು ಕ್ಷೇತ್ರದಲ್ಲಿ ದೇವೇಗೌಡರು ಸೋಲುತ್ತಾರೆ ಎಂದು ಭವಿಷ್ಯ ನುಡಿದರು.