ಬೆಂಗಳೂರು, ಎ27(Daijiworld News/SS): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಕೃಷ್ಣಲಾಲ್ ಮತ್ತು ಅವರ ಆಪ್ತರ ಮನೆ–ಕಚೇರಿ ಸೇರಿ 6 ಸ್ಥಳಗಳ ಮೇಲೆ ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ದಾಳಿ ಮಾಡಿದೆ. ಚುನಾವಣೆ ಮುಗಿದ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದು, ಬೆಂಗಳೂರಿನ 6 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಬಿಬಿಎಂಪಿಯ ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಂಡ ನಿವೇಶನಗಳು ಹಾಗೂ ಕಟ್ಟಡಗಳ ಜಾಗಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೆ ಬೆಲೆ ನಿಗದೀಕರಣ ಮಾಡಿಸಿ ಖಾಸಗಿ ವ್ಯಕ್ತಿಗಳ ಸಹಾಯದಿಂದ ಕೋಟ್ಯಂತರ ರೂ.ಗಳ ವಂಚನೆ ನಡೆಸಿದ್ದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣಲಾಲ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ವಿವಿಧ ತಂಡಗಳಲ್ಲಿ ಧಾವಿಸಿದ ಎಸಿಬಿ ಅಧಿಕಾರಿಗಳು, ಸ್ಥಳೀಯ ಪೊಲೀಸರ ನೆರವು ಪಡೆದು ಕೃಷ್ಣಲಾಲ್ ಅವರ ಸಂಜಯನಗರದ ಮನೆ, ಇವರು ಹಿಂದೆ ಕೆಲಸ ಮಾಡುತ್ತಿದ್ದ ಬಿಬಿಎಂಪಿಯ ಮಹಾದೇವಪುರ ವಲಯ ಕಚೇರಿ, ಬಿಡಿಎ ಎಇಇ ಕಚೇರಿ, ಈ ಅಧಿಕಾರಿಗೆ ಆಪ್ತರಾದ ಭುವನೇಶ್ವರಿ ನಗರದ ಟೆಲಿಕಾಂ ಬಡಾವಣೆಯಲ್ಲಿರುವ ದೀಪಕ್ ಕುಮಾರ್ ಮನೆ, ಅಮಿತ್ ರಿಕಬ್ಚಂದ್ ಜೈನ್ ಅವರ ಗಾಂಧಿನಗರದಲ್ಲಿರುವ ಮನೆ, ಚಿಕ್ಕಪೇಟೆಯಲ್ಲಿರುವ ಕಚೇರಿಗಳನ್ನು ಶೋಧಿಸಿದ್ದಾರೆ.
ಕೃಷ್ಣಲಾಲ್ ಅವರಿಗೆ ವಂಚನೆಯಲ್ಲಿ ಸಹಕರಿಸುತ್ತಿದ್ದ ಭುವನೇಶ್ವರಿ ನಗರದ ಟೆಲಿಕಾಂ ನಗರದ ದೀಪಕ್ ಕುಮಾರ್, ಗಾಂಧಿ ನಗರದ ಅಮಿತ್ ರಿಕಬ್ ಜೈನ್ ಅವರ ಗಾಂಧಿನಗರ ಹಾಗೂ ಚಿಕ್ಕಪೇಟೆಯ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಅಕ್ರಮ ಆಸ್ತಿ-ಪಾಸ್ತಿಗಳ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಕೃಷ್ಣಲಾಲ್ ಅವರ ಸಂಜಯ ನಗರದ ಮನೆ ಸೇರಿ ಒಟ್ಟು 6 ಕಡೆಗಳಲ್ಲಿ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಎಸ್ಪಿ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.
ಕೃಷ್ಣಲಾಲ್ ಅವರು ಹಿಂದೆ ಮಹದೇವಪುರ ವಲಯದಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸಿದ್ದು, ಅಮಿತ್ ರಿಕಬ್ಚಂದ್ ಜೈನ್ ಹಾಗೂ ದೀಪಕ್ ಕುಮಾರ್ ಅವರ ಜತೆ ಸೇರಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ನಿವೇಶನಗಳು ಕಟ್ಟಡಕ್ಕಿಂತ ಹೆಚ್ಚಿನ ಜಾಗಕ್ಕೆ ಬೆಲೆ ನಿಗದೀಕರಣ ಮಾಡಿ, ನಗರಸಭೆ ಹಾಗೂ ಬಿಬಿಎಂಪಿ ಅಭಿವೃದ್ಧಿಪಡಿಸಿದ ಅಡ್ಡರಸ್ತೆಗಳನ್ನೂ ಸಹ ಖಾಸಗಿ ವ್ಯಕ್ತಿಗಳ ಆಸ್ತಿಯೆಂದು ಬಿಂಬಿಸುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅಪಾರ ಪ್ರಮಾಣದ ಅಕ್ರಮದ ಲಾಭ ಮಾಡಿಕೊಟ್ಟು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ನಷ್ಟ ಉಂಟು ಮಾಡಿದ್ದರು.
ಕೆಲವು ಸರ್ಕಾರಿ ಜಾಗವನ್ನು ಖಾಸಗಿ ಜಾಗವೆಂದು ಬಿಂಬಿಸಿ ಕೃಷ್ಣಲಾಲ್ ಪರಿಹಾರ ನೀಡಿದ್ದಾರೆ. ಈ ಅಕ್ರಮ ವ್ಯವಹಾರದಲ್ಲಿ 50ಕ್ಕೂ ಹೆಚ್ಚು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಶಂಕಿಸಿದ್ದಾರೆ.