ದೆಹಲಿ, ಫೆ 16 (DaijiworldNews/AA): ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ನಿರ್ಣಯ ಮಂಡಿಸಿದ್ದಾರೆ. ನಾಳೆ ನಡೆಯಲಿರುವ ಸದನ ಕಲಾಪದಲ್ಲಿ ಪ್ರಸ್ತಾವನೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಎಎಪಿ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ. ಈ ಮಧ್ಯೆ ನಮ್ಮ ಪಕ್ಷದ ಶಾಸಕರು ಹಾಗೂ ನಾಯಕರು ಎಎಪಿ ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ತೆರಳುತ್ತಾರೆ ಎಂಬ ಸುಳ್ಳು ಸುದ್ದಿ ಹರಡಲಾಗುತ್ತಿದೆ. ನಮ್ಮ ಸರ್ಕಾರದಲ್ಲಿ ಸಂಖ್ಯಾ ಬಲವಿಲ್ಲ ಎಂದು ಹೇಳುತ್ತಿದ್ದಾರೆ. ನಮ್ಮ ಶಾಸಕರು ನಮ್ಮ ಪಕ್ಷದಲ್ಲೇ ಇದ್ದಾರೆ, ಅವರ್ಯಾರೂ ಪಕ್ಷ ತೊರೆದಿಲ್ಲ. ಈ ವಿಷಯವನ್ನು ನಾವು ಜನರ ಮುಂದೆ ಸಾಬೀತು ಪಡಿಸಬೇಕಿದೆ. ಆದ್ದರಿಂದ ನಾನು ವಿಶ್ವಾಸ ನಿರ್ಣಯವನ್ನು ಮಂಡಿಸುತ್ತೇನೆ ಎಂದರು.
ಬಿಜೆಪಿ ಎಎಪಿ ಶಾಸಕರನ್ನು ಭೇಟಿ ಮಾಡಿ ತಮ್ಮ ಬಳಿ ಸೆಳೆಯುತ್ತಿದ್ದಾರೆ. ಅವರು ನಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆ ನಾನು ಈ ಕ್ರಮ ಅನುಸರಿಸುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.