ಬೆಂಗಳೂರು, ಫೆ 16 (DaijiworldNews/AA): ಸಂಸದ ಅನಂತ್ ಕುಮಾರ್ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಅನಂತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದೆ.
ಸಂಸದ ಅನಂತ್ ಕುಮಾರ್ ಅವರ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಕುರಿತು ವಿಚಾರಣೆ ನಡೆಸಿದ ನ್ಯಾ. ಕೃಷ್ಣದೀಕ್ಷಿತ್ ಪೀಠ ಅವರು ಅನಂತ್ ಕುಮಾರ್ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ. ಅವರನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯನ್ನು ಗೌರವಿಸುವುದು ನಮ್ಮ ಜವಾಬ್ದಾರಿ. ಅವರ ನೀತಿ ಇಷ್ಟವಿಲ್ಲದೇ ಇರಬಹುದು. ವಿರೋಧ ಪಡಿಸಬಹುದು. 'ರಾಮಜನ್ಮ ಭೂಮಿ ನಿನ್ನದಲ್ಲ ಮಗನೇ' ಎಂಬ ಮಾತುಗಳನ್ನೆಲ್ಲಾ ಆಡುತ್ತಾರಾ? ಇದು ಎಷ್ಟು ಕೀಳುಭಾಷೆ ಎಂದು ನ್ಯಾಯಮೂರ್ತಿಗಳು ಅನಂತ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾವು ಪದಬಳಕೆ ಮಾಡುವಾಗ ಎಚ್ಚರದಿಂದ ಇರಬೇಕು. ನಿಮ್ಮ ಅರ್ಜಿದಾರರಿಗೆ ಸಲಹೆ ನೀಡಿ ಎಂದು ಅನಂತ್ ಕುಮಾರ್ ಪರ ವಕೀಲರಿಗೆ ಸೂಚನೆ ನೀಡಲಾಗಿದೆ. ಇನ್ನು ಅನಂತ್ ಕುಮಾರ್ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚನೆ ನೀಡಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.