ಪಾಟ್ನಾ, ಫೆ 16 (DaijiworldNews/AA): "ನಿತೀಶ್ ಕುಮಾರ್ ಗಾಗಿ ನಮ್ಮ ಬಾಗಿಲು ಸದಾ ತೆರೆದಿರುತ್ತದೆ" ಎಂದು ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಮುಂಬರುವ ರಾಜ್ಯಸಭಾ ಚುನಾವಣೆಗೆ ಮನೋಜ್ ಝಾ ಮತ್ತು ಸಂಜಯ್ ಯಾದವ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರ ಜೊತೆಗಿದ್ದ ಲಾಲು ಪ್ರಸಾದ್ ಯಾದವ್ ಅವರು ನಿತೀಶ್ ಕುರಿತು ಮಾತನಾಡಿದ್ದಾರೆ. "ನಿತೀಶ್ ಕುಮಾರ್ ಅವರು ಹಿಂತಿರುಗಿ ಬರಲಿ. ನಂತರ ನಾವು ನೋಡುತ್ತೇವೆ. ಅವರಿಗಾಗಿ ಬಾಗಿಲು ಯಾವಾಗಲೂ ತೆರೆದಿರುತ್ತದೆ" ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಜೆಡಿಯು ಮುಖ್ಯ ವಕ್ತಾರ ಮತ್ತು ಎಂಎಲ್ ಸಿ ನೀರಜ್ ಕುಮಾರ್, "ಬಾಗಿಲುಗಳು ಇನ್ನೂ ತೆರೆದಿವೆ ಎಂದು ಲಾಲು ಜಿ ಹೇಳ್ತಾರೆ. ಅಲಿಘರ್ ನ ಪ್ರಸಿದ್ಧ ಬೀಗವನ್ನ ಬಾಗಿಲಿಗೆ ಹಾಕಲಾಗಿದೆ ಎಂದು ಅವರಿಗೆ ಗೊತ್ತಿರಬೇಕು. ನಮ್ಮ ನಾಯಕ ನಿತೀಶ್ ಕುಮಾರ್ ಅವರು ಆರ್ ಜೆಡಿ ನಮ್ಮೊಂದಿಗೆ ಅಧಿಕಾರ ಹಂಚಿಕೊಂಡಾಗಲೆಲ್ಲಾ ಅದು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂತಿರುಗುವ ಪ್ರಶ್ನೆಯೇ ಇಲ್ಲ" ಎಂದು ಅವರು ಹೇಳಿದ್ದಾರೆ.
ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ಎನ್ ಡಿಎ ಬಣಕ್ಕೆ ಸೇರಿ ಒಂದು ತಿಂಗಳು ಕಳೆಯುತ್ತಾ ಬರುತ್ತಿದೆ. ಇದೀಗ ಲಾಲೂ ಪ್ರಸಾದ್ ಅವರ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.