ಪಂಚಕುಲ, ಫೆ 16 (DaijiworldNews/AA): ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಆಟಗಾರ ಯುವರಾಜ್ ಸಿಂಗ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಹರಿಯಾಣದ ಪಂಚಕುಲದಲ್ಲಿರುವ ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಸಿಂಗ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.
ಆರು ತಿಂಗಳ ಹಿಂದೆ ಕಳ್ಳತನ ನಡೆದಿದ್ದು, ಇದೀಗ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಚಿನ್ನಾಭರಣ ಮತ್ತು 75 ಸಾವಿರ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಶಬ್ನಮ್ ಸಿಂಗ್ ಅವರು ಎಂಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇನ್ನು ವರದಿಯ ಅನುಸಾರ ಈ ಕಳವು ಪ್ರಕರಣ 2023 ರಲ್ಲಿ ನಡೆದಿದೆ ಎನ್ನಲಾಗಿದೆ.
ಶಬ್ನಮ್ ಸಿಂಗ್ ಅವರು ನೀಡಿರುವ ದೂರಿನಲ್ಲಿ ಮನೆಯಲ್ಲಿ ಇಬ್ಬರು ಸೇವಕರಿದ್ದು, ಅವರೇ ಈ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ. ಆ ಸೇವಕರನ್ನು ಲಲಿತಾ ದೇವಿ ಹಾಗೂ ಶೈಲೇಂದ್ರ ದಾಸ್ ಎಂದು ಗುರುತಿಸಲಾಗಿದೆ. ದೂರಿನ ಮೇರೆಗೆ ಇವರಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ.
ಶಬ್ನಮ್ ಸಿಂಗ್ ಅವರು ಗುರ್ಗಾಂವ್ ನಲ್ಲಿರುವ ತಮ್ಮ ಇನ್ನೊಂದು ಮನೆಯಲ್ಲಿ ವಾಸಿಸಲು ತೆರಳಿದ್ದರು. ಅಲ್ಲಿಂದ ಪಂಚಕುಲದಲ್ಲಿರುವ ಮನೆಗೆ ವಾಪಾಸ್ ಆದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಒಟ್ಟು 1 ಲಕ್ಷ 75 ಸಾವಿರ ಮೌಲ್ಯದ ಸ್ವತ್ತು ಕಳವಾಗಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.