ಬೆಂಗಳೂರು , ಎ27(Daijiworld News/SS): ನನಗೆ 2 ವರ್ಷ ಮೊದಲೇ ಪುಲ್ವಾಮಾ ದಾಳಿ ಬಗ್ಗೆ ಗೊತ್ತಿತ್ತು ಎಂದಿರುವ ಸಿಎಂ ಕುಮಾರಸ್ವಾಮಿ ವಿರುದ್ಧ ದೇಶದ್ರೋಹ ಕಾಯಿದೆಯಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪುಲ್ವಾಮಾ ದಾಳಿ ಆಗುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ನನಗೆ ಗೊತ್ತಿತ್ತು, ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಈ ಬಗ್ಗೆ ನನಗೆ ತಿಳಿಸಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಭಾರತ-ಪಾಕ್ ನಡುವೆ ಸಂಘರ್ಷ ನಡೆಯುತ್ತೆ. ಏನಾದ್ರು ಕಥೆ ಸೃಷ್ಟಿ ಮಾಡಿ ಮೋದಿ ಮತ ಕೇಳುತ್ತಾರೆ ಎಂದು ಎರಡು ವರ್ಷದ ಹಿಂದೆಯೇ ಎಂದು ನಿವೃತ್ತ ಸೇನಾಧಿಕಾರಿ ಹೇಳಿದ್ದರು. ನನ್ನ ಬಳಿ ಚರ್ಚೆ ಮಾಡಿದ್ದರು. ಈಗ ಅದೇ ರೀತಿಯಲ್ಲಿ ಆಗಿದೆ ಎಂದು ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿ ಪ್ರಚಾರ ಸಭೆಯಲ್ಲಿ ಹೇಳಿಕೆ ನೀಡಿದ್ದರು.
ಇದೀಗ ಈ ಹೇಳಿಕೆ ವಿರುದ್ಧ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ದೇಶದ್ರೋಹ, ದೇಶದ ಸಾರ್ವಭೌಮತೆಗೆ ಧಕ್ಕೆ, ವಿಧ್ವಂಸಕ ಕೃತ್ಯದ ಮಾಹಿತಿ ಉದ್ದೇಶ ಪೂರ್ವಕವಾಗಿ ಮುಚ್ಚಿಟ್ಟ ಅಪರಾಧ, ರಾಷ್ಟ್ರೀಯ ಭದ್ರತೆಗೆ ಭಂಗ, ಪ್ರಮಾಣ ವಚನ ಉಲ್ಲಂಘನೆ ಅಪರಾಧಗಳಡಿ ಐಪಿಸಿ, ರಾಷ್ಟ್ರೀಯ ಭದ್ರತಾ ಕಾಯಿದೆ, ಭಯೋತ್ಪಾದನಾ ನಿಗ್ರಹ ಕಾಯಿದೆಯಡಿ ಪ್ರಕರಣ ದಾಖಲಿಸಬೇಕೆಂದು ಕೋರಿದ್ದಾರೆ.
ಮಾಹಿತಿ ಮುಚ್ಚಿಟ್ಟು ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಯಲು ಹಾಗೂ ಭದ್ರತಾ ಪಡೆಗಳ ಯೋಧರು ಉಗ್ರರ ದಾಳಿಗೆ ಬಲಿಯಾಗಲು ಪರೋಕ್ಷವಾಗಿ ಕುಮಾರಸ್ವಾಮಿ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.