ನವದೆಹಲಿ, ಫೆ 17(DaijiworldNews/AA): 'ಆಮ್ ಆದ್ಮಿ ಪಕ್ಷವು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಎಲ್ಲಾ ಕಡೆಗಳಿಂದಲೂ ದಾಳಿ ಎದುರಿಸುತ್ತಿದೆ' ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಅರೋಪಿಸಿದ್ದಾರೆ.
ವಿಶ್ವಾಸಮತ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿದ ಬಳಿಕ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಎಎಪಿ ಸರ್ಕಾರದ ಯಾವುದೇ ಶಾಸಕರೂ ಅನರ್ಹರಾಗಿಲ್ಲ. ಇಬ್ಬರು ಜೈಲಿನಲ್ಲಿದ್ದಾರೆ. ಕೆಲವರಿಗೆ ಅನಾರೋಗ್ಯ ಇದೆ. ಇನ್ನು ಕೆಲವರು ದೆಹಲಿಯಲ್ಲಿಲ್ಲ. ನಮ್ಮ ಶಾಸಕರಿಗೆ ಆಮಿಷ ಒಡ್ಡಿ ಸರ್ಕಾರವನ್ನು ಬೀಳಿಸುವ ಯತ್ನವಾಗುತ್ತಿದೆ ಆದ್ದರಿಂದ ವಿಶ್ವಾಸಮತ ಪ್ರಸ್ತಾವನೆಯನ್ನು ಮಂಡಿಸಬೇಕಾಯಿತು ಎಂದರು.
ಹಲವು ಶಾಸಕರನ್ನು ಬಿಜೆಪಿ ಅವರು ಭೇಟಿ ಮಾಡಿ ಪಕ್ಷ ಬದಲಿಸುವಂತೆ ಆಮಿಷ ಒಡ್ಡಿದ ಬಗ್ಗೆ ಕೆಲ ಶಾಸಕರೇ ಖುದ್ದಾಗಿ ನನ್ನ ಬಳಿ ಹೇಳಿಕೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ, 2029ರಲ್ಲಿ ಬಿಜೆಪಿಯಿಂದ ದೇಶವನ್ನು ಎಎಪಿ ಮುಕ್ತಗೊಳಿಸುತ್ತದೆ ಎಂದು ಅವರು ಹೇಳಿದರು.
ಇಂದು ನಡೆದ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಒಟ್ಟು 62 ಶಾಸಕರು ಸದನದಲ್ಲಿ ಹಾಜರಿದ್ದರು. ಎಎಪಿ ಸರ್ಕಾರದ ಪರವಾಗಿ 54 ಮತಗಳು ಬಿದ್ದವು. ಈ ಮೂಲಕ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ವಿಶ್ವಾಸಮತ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿದ್ದಾರೆ.