ಕೊಲ್ಕತ್ತಾ, ಏ 27(Daijiworld News/MSP): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷ ಉಡುಗೊರೆಯಾಗಿ ನನಗೆ ಕುರ್ತಾ ಕಳುಹಿಸಿಕೊಡುತ್ತಾರೆ ಎಂಬ ಹೇಳಿಕೆಯ ಕುರಿತು ವ್ಯಂಗ್ಯವಾಡಿರುವ ಕಾಂಗ್ರೆಸ್ ಹಿರಿಯ ನಾಯಕ ರಾಜ್ ಬಬ್ಬರ್ ,ಪ್ರಧಾನಿ ನರೇಂದ್ರ ಮೋದಿ ಅವರ ಕುರ್ತಾ ಸೈಜ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಹೇಗೆ ತಿಳಿಯಿತು? ಎಂದು ಕಿಚಾಯಿಸಿದ್ದಾರೆ.
ವಿರೋಧಪಕ್ಷದಲ್ಲೂ ನನಗೆ ಉತ್ತಮ ಸ್ನೇಹಿತರಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿವರ್ಷ ನನಗೆ ಕುರ್ತಾ ಹಾಗೂ ಸಿಹಿತಿನಿಸುಗಳನ್ನು ಕಳುಹಿಸಿ ಕೊಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.
ಪಶ್ಚಿಮ ಬಂಗಾಳದ ಗಿಣ್ಣಿನಿಂದ ಮಾಡಿದ ಸಿಹಿ ತಿನಿಸು ಹಾಗೂ ಕುರ್ತಾ ವಿಶ್ವದಾದ್ಯಂತ ಜನಪ್ರಿಯವಾಗಿವೆ. ಆದರೆ ಇಲ್ಲಿಯವರೆಗೆ ಮಮತಾ ಅವರು ನಮಗೆ ಅಥವಾ ಬೇರೆ ಯಾರಿಗೂ ಸಿಹಿತಿಂಡಿ ಅಥವಾ ಕುರ್ತಾ ಕಳುಹಿಸಿಲ್ಲ. ಆದರೆ ಪ್ರಧಾನಿ ಕುರ್ತಾದ ಸೈಜ್ ಮಾತ್ರ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರ್ಥ. ಹೀಗಾಗಿ ಮೋದಿ ಅವರಿಗೆ 56 ಇಂಚು ಎದೆ ಇದೆಯಾ ಎಂಬುವುದನ್ನು ಪ್ರಶ್ನಿಸಬೇಕಾಗುತ್ತದೆ ಎಂದಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಮತಾ ಬ್ಯಾನರ್ಜಿ, ಮೋದಿ ಅವರಿಗೆ ಕುರ್ತಾ ಕಳುಹಿಸಿದ್ದು ಕೇವಲ ಸೌಜನ್ಯಕ್ಕಾಗಿಯೇ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ. ನಮ್ಮ ಸಂಸ್ಕೃತಿಯ ಪ್ರತೀಕವಾಗಿ ಮೋದಿಗೆ ಮಾತ್ರವಲ್ಲದೆ ಹಲವು ರಾಜಕೀಯ ನಾಯಕರಿಗೆ ಉಡುಗೊರೆ ಕಳುಹಿಸಿಕೊಟ್ಟಿದ್ದೆ ಎಂದು ಸ್ಪಷ್ಟಪಡಿಸಿದ್ದರು.