ನವದೆಹಲಿ, ಫೆ 20(DaijiworldNews/SK): ಪಶ್ಚಿಮ ಬಂಗಾಳದಲ್ಲಿ ಕೆಲವು ಜನರ ಆಧಾರ್ ಕಾರ್ಡ್ ಗಳನ್ನು ಏಕಾಏಕಿ ನಿಷ್ಕ್ರಿಯಗೊಳಿಸಲಾಗಿದೆ. ಇದಕ್ಕೆ ನಿಖರ ಕಾರಣ ತಿಳಿಸಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಮಮತಾ ಬ್ಯಾನರ್ಜಿ ಅವರು ಬರೆದಿರುವ ಪತ್ರದಲ್ಲಿ, ಏಕಾಏಕಿ ಜನರ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಿದ್ದರಿಂದ ರಾಜ್ಯದ ಜನರಲ್ಲಿ ತೀವ್ರ ಆತಂಕ , ಗೊಂದಲ ಉಂಟಾಗಿದೆ. ಈ ಕ್ರಮವು ನಿಯಮಬಾಹಿರ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾದುದಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸುತ್ತಿರುವ ಬಗ್ಗೆ ಈ ಜನರಿಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದೆ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. 'ಈ ಸಂಬಂಧ ಪರಿಹಾರ ನೀಡುವಂತೆ ದೊಡ್ಡ ಸಂಖ್ಯೆಯಲ್ಲಿ ಬಾಧಿತ ಜನರು ರಾಜ್ಯಾಡಳಿತದ ಬಳಿ ಬರುತ್ತಿದ್ದಾರೆ. ಈ ಕಾರಣದಿಂದ ಅದಷ್ಟು ಬೇಗ ಆಧಾರ್ ಕಾರ್ಡ್ ಗಳನ್ನು ನಿಷ್ಕ್ರಿಯಗೊಳಿಸಿರೋದಕ್ಕೆ ಕಾರಣವೇನು ಎಂಬುದನ್ನು ನಿಮ್ಮಿಂದ ತಿಳಿಯಲು ಬಯಸುತ್ತೇನೆ' ಎಂದು ಬರೆದಿದ್ದಾರೆ.
ಇನ್ನು ಲೋಕಸಭಾ ಚುನಾವಣೆಗೂ ಮುನ್ನ ಜನರಲ್ಲಿ ಆತಂಕದ ಮನೋಭಾವ ಸೃಷ್ಟಿಸುವ ಉದ್ದೇಶದಿಂದ ಇದೊಂದು ಯೋಜಿತ ಯೋಜನೆಯಾಗಿದೆ' ಎಂದು ಮಮತಾ ಆರೋಪಿಸಿದ್ದಾರೆ.