ಬೆಂಗಳೂರು, ಫೆ 20(DaijiworldNews/SK): ತೆರಿಗೆ, ಅನುದಾನ ತಾರತಮ್ಯದ ಬಗ್ಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ವಿಧಾನ ಮಂಡಲ ಅಧಿವೇಶನದಲ್ಲಿ ನೇರ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, " ರಾಷ್ಟ್ರದ ಹಿರಿಯ, ನುರಿತ ಆರ್ಥಿಕ ತಜ್ಞರನ್ನು, ಮಾಧ್ಯಮಗಳನ್ನು ಕೂಡಿಸಿಕೊಂಡು ಎಲ್ಲರ ಎದುರು ಬಹಿರಂಗ ಚರ್ಚೆ ಮಾಡೋಣ ಬನ್ನಿ.
ನಿಮಗೆ ಕೇಂದ್ರದಿಂದ ನಿಜವಾಗಿಯೂ ಅನ್ಯಾಯ ಆಗುತ್ತಿರುವುದೇ ನಿಜವಾದರೇ ನಿಮ್ಮ ಜತೆ ನಾವೂ ದನಿ ಎತ್ತುತ್ತೇವೆ. ಇದರ ಜೊತೆಗೆ ಕೇಂದ್ರದಿಂದ ಅನ್ಯಾಯವಾಗುತ್ತಿರುವ ಆಧಾರಗಳನ್ನು ನಾಡಿನ ಮಂದೆ ಇಡಿ. ಇದರ ಬಗ್ಗ್ರ್ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
ಇನ್ನು ವೀರಾವೇಷದಿಂದ ಸದನದ ಒಳಗೆ ಭಾಷಣ ಮಾಡುತ್ತಿರುವ ಸಿದ್ದರಾಮಯ್ಯ ಅವರು ಕನ್ನಡಿಗರಿಗೆ ಅನ್ಯಾಯ ಆಯಿತು ಎನ್ನುತ್ತಾರೆ. ಕೇಂದ್ರ ಸರ್ಕಾರದಿಂದ ಹಣ ಬರಲಿಲ್ಲ, ಬರಪೀಡಿತ ರೈತರಿಗೆ ಪರಿಹಾರ ಕೊಡಿ ಎಂದರೆ 2000 ರೂ. ಕೊಡುತ್ತಾರೆ. ಈ 2000 ರೂ.ನಲ್ಲಿ 25% ರಾಜ್ಯದ್ದು, ಉಳಿದ 75% ಕೇಂದ್ರದ್ದು. ನಾವು ಕೊಟ್ಟೆವು ಎಂದು ಇವರು ಹೇಳಿದ್ದೇ ಹೇಳಿದ್ದು. ನಾನು ಹೇಳೋದೇ ಸತ್ಯ, ನಾನು ಹೇಳೋದೇ ಸತ್ಯ ಎಂದು ಹೇಳ್ತಾನೇ ಇದ್ದಾರೆ. ನೂರು ಬಾರಿ ಸುಳ್ಳು ಹೇಳಿ ಅದನ್ನೆ ಸತ್ಯ ಮಾಡು ಎಂದು ನಮ್ಮ ಹಿರಿಯರು ಗಾದೆ ಮಾತು ಹೇಳಿದ್ದಾರೆ, ಅದನ್ನು ನಮ್ಮ ಮುಖ್ಯಮಂತ್ರಿಗಳು ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಇನ್ನು ರಾಜ್ಯ ಸರ್ಕಾರಕ್ಕೆ ನನ್ನ ಸಲಹೆ ಇಷ್ಟೇ. ಈಗ 16ನೇ ಹಣಕಾಸು ಆಯೋಗ ರಚನೆ ಆಗಿದೆ. ಆಯೋಗ ರಾಜ್ಯಕ್ಕೆ ಬಂದಾಗ ಸರಿಯಾದ ಮಾಹಿತಿ ಕೊಟ್ಟು ಹಕ್ಕು ಮಂಡಿಸಿ. ಕೇಂದ್ರ ಸರ್ಕಾರಕ್ಕೆ ಮನವಿ ಕೊಟ್ಟರೆ ಅಥವಾ ದೂರಿದರೆ ಪ್ರಯೋಜನ ಇಲ್ಲ. ತೆರಿಗೆ ಪಾಲು, ಅನುದಾನ ಹಂಚಿಕೆ ಮಾಡುವುದು ಆಯೋಗವೇ ಹೊರತು ಕೇಂದ್ರವಲ್ಲ. ಈಗಾಗಲೇ ಕೇಂದ್ರದಿಂದ ಬಂದಿರುವ ಹಣವನ್ನು ಸರ್ಕಾರ ಸದ್ಬಳಕೆ ಮಾಡಿಲ್ಲ. ಆ ಬಗ್ಗೆ ಇವರು ಮಾತೇ ಆಡುತ್ತಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.