ಮುಂಬೈ, ಫೆ 21(DaijiworldNews/AA): ಧಾರ್ಮಿಕ ಕಾರ್ಯಕ್ರಮದಲ್ಲಿ ನೀಡಿದ ಪ್ರಸಾದವನ್ನು ಸೇವಿಸಿ ಸುಮಾರು 300 ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದಾರೆ. ಇನ್ನು ಅಸ್ವಸ್ಥಗೊಂಡ ಎಲ್ಲರಿಗೂ ರಸ್ತೆಯಲ್ಲಿಯೇ ಮಲಗಿಸಿ ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡಿದ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ.
ಬುಲ್ಧಾನದ ಲೋನಾರ್ ನ ಸೋಮಥಾನ ಗ್ರಾಮದಲ್ಲಿ ಹರಿಣಂ ಸಪ್ತಾಹ ಎಂಬ ಧಾರ್ಮಿಕ ಕಾರ್ಯಕ್ರಮವು ಒಂದು ವಾರದಿಂದ ನಡೆಯುತ್ತಿದೆ. ಈ ಕಾರ್ಯಕ್ರಮದ ಕೊನೆಯ ದಿನವಾದ ಮಂಗಳವಾರ ರಾತ್ರಿ ಪ್ರಸಾದ ವಿತರಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿತರಿಸಲಾಗಿದ್ದ ಪ್ರಸಾದವನ್ನು ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಮಕ್ಕಳು ಸೇರಿದಂತೆ ಸುಮಾರು 300 ಕ್ಕೂ ಅಧಿಕ ಮಂದಿ ಸೇವಿಸಿದ್ದಾರೆ. ಈ ಪ್ರಸಾದವನ್ನು ಸೇವಿಸಿದವರಲ್ಲಿ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಪ್ರಾರಂಭವಾಗಿದೆ ಎನ್ನಲಾಗಿದೆ.
ಇನ್ನು ಅಸ್ವಸ್ಥಗೊಂಡವರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಉಂಟಾಗಿದ್ದು, ಅನೇಕ ರೋಗಿಗಳಿಗೆ ಆಸ್ಪತ್ರೆಯ ಹೊರಗಿನ ರಸ್ತೆಯಲ್ಲೇ ಚಿಕಿತ್ಸೆ ನೀಡಬೇಕಾಯಿತು. ರೋಗಿಗಳಿಗೆ ಡ್ರಿಪ್ಸ್ ನೀಡಲು ಮರಗಳಿಗೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಡ್ರಿಪ್ಸ್ ಬಾಟಲಿಗಳನ್ನು ಅಳವಡಿಸಲಾಗಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರೋಗಿಗಳಿಗೆ ರಸ್ತೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.