ಕಾನ್ಪುರ, ಫೆ 21 (DaijiworldNews/ AK):ಬಿಜೆಪಿ ನೇತೃತ್ವದ ಕೇಂದ್ರವು 'ಜನಸಂಖ್ಯೆಯ ಶೇ 90'ರಷ್ಟಿರುವ ದಲಿತರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಒಟ್ಟು ಜನಸಂಖ್ಯೆಯ ಸುಮಾರು 90% ರಷ್ಟಿರುವ ಹಿಂದುಳಿದ ವರ್ಗಗಳು, ದಲಿತರು, ಬುಡಕಟ್ಟು ಜನಾಂಗಗಳು ಮತ್ತು ಅಲ್ಪಸಂಖ್ಯಾತರಿಗೆ ಉದ್ಯೋಗ ಸಿಗದಿರುವ ಇದು ಯಾವ ರೀತಿಯ ರಾಮರಾಜ್ಯ ಎಂದು ಹೇಳಿದರು.
‘ದೇಶದಲ್ಲಿ ಶೇ 50ರಷ್ಟು ಜನ ಹಿಂದುಳಿದ ವರ್ಗದವರು, ಶೇ 15ರಷ್ಟು ದಲಿತರು, ಶೇ 8ರಷ್ಟು ಆದಿವಾಸಿಗಳು, ಶೇ 15ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಇಲ್ಲಿ ಎಷ್ಟಾದರೂ ಅರಚಿಕೊಳ್ಳಿ, ಆದರೆ ಈ ದೇಶದಲ್ಲಿ ಉದ್ಯೋಗ ಸಿಗುವುದಿಲ್ಲ. ನೀವು ಹಿಂದುಳಿದ, ದಲಿತ, ಬುಡಕಟ್ಟು ಅಥವಾ ಬಡ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ನಿಮಗೆ ಉದ್ಯೋಗ ಸಿಗುವುದಿಲ್ಲ. ನಿಮಗೆ ಉದ್ಯೋಗ ಸಿಗುವುದು ನರೇಂದ್ರ ಮೋದಿ ಅವರಿಗೆ ಇಷ್ಟವಿಲ್ಲ ಎಂದರು.
ನೀವು ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ನೋಡಿದ್ದೀರಿ. ಎಷ್ಟು ಮಂದಿ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗಗಳಿಂದ ಎಷ್ಟು ಮಂದಿ ಅಲ್ಲಿದ್ದರು. ಬುಡಕಟ್ಟು ಜನಾಂಗಕ್ಕೆ ಸೇರಿದ ರಾಷ್ಟ್ರಪತಿಯನ್ನೂ (ದ್ರೌಪದಿ ಮುರ್ಮು) ಆಹ್ವಾನಿಸಿಲ್ಲ. ದಲಿತ ಮಾಜಿ ರಾಷ್ಟ್ರಪತಿ (ರಾಮನಾಥ್ ಕೋವಿಂದ್) ಅವರನ್ನೂ ಒಳಗೆ ಬಿಡಲಿಲ್ಲ' ಎಂದು ಅವರು ಆರೋಪಿಸಿದ್ದಾರೆ.
ಜಾತಿ ಗಣತಿಗಾಗಿ ತಮ್ಮ ಪಕ್ಷ ಮತ್ತು ಮಿತ್ರಪಕ್ಷಗಳ ಬೇಡಿಕೆ ಕುರಿತು ಮಾತನಾಡಿದ ರಾಹುಲ್, ಇಂತಹ ಸಮೀಕ್ಷೆಯಿಂದ ಮಾತ್ರ ದೇಶದಲ್ಲಿ ಹಿಂದುಳಿದವರ ಯೋಗಕ್ಷೇಮ ಮತ್ತು ಅವರ ಬಳಿ ಎಷ್ಟು ಹಣವಿದೆ ಎಂದು ತಿಳಿಯಲು ಸಹಾಯ ಮಾಡುತ್ತದೆ. ಭಾರತದ ಪ್ರಗತಿಗೆ ಅತಿದೊಡ್ಡ ಕ್ರಾಂತಿಕಾರಿ ಹೆಜ್ಜೆ ಜಾತಿವಾರು ಜನಗಣತಿ ಎಂದು ನಾವು ಹೇಳಿದ್ದೇವೆ ಎಂದು ಹೇಳಿದರು.