ಬೆಂಗಳೂರು, ಫೆ 21(DaijiworldNews/AA): ರಾಷ್ಟ್ರಕವಿ ಕುವೆಂಪು ರಚಿಸಿದ ನಾಡಗೀತೆಯನ್ನು ಖಾಸಗಿ ಶಾಲೆಗಳಲ್ಲಿ ಹಾಡುವುದು ಕಡ್ಡಾಯವಲ್ಲ ಎಂದು ಸಿಎಂ ಸಿದ್ಧರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತೆ ಕನ್ನಡ ವಿರೋಧಿ ಧೋರಣೆ ತೋರಿಸಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 2 ದಿನಗಳ ಹಿಂದೆ ಕುವೆಂಪು ಅವರ 'ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಎಂಬ ಘೋಷವಾಕ್ಯ ಬದಲಾಯಿಸುವ ಹುನ್ನಾರ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ನಾಡಗೀತೆ ಕಡ್ಡಾಯವಲ್ಲ ಎಂಬ ಆದೇಶವನ್ನು ಸಿಎಂ ಹೊರಡಿಸಿ ಮತ್ತೊಮ್ಮೆ ಕುವೆಂಪು ಹಾಗೂ ಕನ್ನಡಾಂಬೆಗೆ ಕಾಂಗ್ರೆಸ್ ಸರ್ಕಾರ ಅವಮಾನಿಸಿದೆ ಎಂದು ಕಿಡಿಕಾರಿದ್ದಾರೆ.
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆಯನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಇದೀಗ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ತಿದ್ದುಪಡಿ ಆದೇಶ ಹೊರಡಿಸಿದೆ. ಇನ್ನು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ ತಿದ್ದುಪಡಿ ಆದೇಶದಲ್ಲಿ ಎಲ್ಲಾ ಶಾಲೆಗಳಲ್ಲಿ (ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ) ದೈನಂದಿನ ಚಟುವಟಿಕೆ ಆರಂಭವಾಗುವ ಮುನ್ನ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದೆ.