ನವದೆಹಲಿ, ಎ27(Daijiworld News/SS): ಪ್ರಚಾರದ ವೇಳೆ ನಿಯಮ ಉಲ್ಲಂಘನೆಯಾಗಿದ್ದು, ಈ ನಿಟ್ಟಿನಲ್ಲಿ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಾವುದೇ ಅನುಮತಿ ಪಡೆಯದೆ ಗೌತಮ್ ಗಂಭೀರ್ ಅವರು ಏ.25ರಂದು ದೆಹಲಿಯ ಜಂಗ್ಪುರಾದಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದರು. ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಹೀಗಾಗಿ ಗೌತಮ್ ಗಂಭೀರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಚುನಾವಣಾ ಆಯೋಗ ಪೊಲೀಸರಿಗೆ ಸೂಚಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೆಹಲಿಯ ಪೊಲೀಸರು ಎಫ್ಐಆರ್ ದಾಖಲಿಸಿದ ಬಳಿಕ ಅತಿಶಿ ಟ್ವೀಟ್ ಮಾಡಿದ್ದು, ಮೊದಲು ನಾಮಪತ್ರ ಸಲ್ಲಿಸುವುದರಲ್ಲಿ ಎಡವಿದಿರಿ. ನಂತರ ಎರಡು ಮತದಾನ ಗುರುತು ಪತ್ರ ಹೊಂದುವ ಮೂಲಕ ಕ್ರಿಮಿನಲ್ ಅಪರಾಧ ಮಾಡಿದ್ದೀರಿ. ಈಗ ರ್ಯಾಲಿ ನಡೆಸಲು ಅನುಮತಿ ಪಡೆಯದೆ ಎಫ್ಐಆರ್ ದಾಖಲಾಗಿದೆ. ನಿಮಗೆ ನಿಯಮಗಳೇ ಗೊತ್ತಿಲ್ಲವೆಂದ ಮೇಲೆ ಆಟಕ್ಕೆ ಯಾಕೆ ಇಳಿಯುತ್ತೀರಿ ಎಂದು ವ್ಯಂಗ್ಯವಾಡಿದ್ದಾರೆ.