ಬೆಂಗಳೂರು, ಫೆ 21 (DaijiworldNews/ AK):ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ ಭಾರತ ವಿಶ್ವಗುರುವಾಗಲಿದೆ. ಈ ನಿಟ್ಟಿನಲ್ಲಿ ಎನ್ಡಿಎ 400 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲುವ ಮೋದಿಯವರ ಸಂಕಲ್ಪ ಈಡೇರಬೇಕಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನುಡಿದರು.
ಕಲಬುರ್ಗಿಯಲ್ಲಿ ಇಂದು ಬಿಜೆಪಿ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ನಾಶ ಮಾಡುತ್ತಾರೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆಯವರು ನೇತೃತ್ವ ವಹಿಸಿದ ಬಳಿಕ ಕಾಂಗ್ರೆಸ್ ಪಕ್ಷದ ಸ್ಥಿತಿ ಹದಗೆಟ್ಟಿದೆ ಎಂದು ವಿಶ್ಲೇಷಿಸಿದರು.ಬಸವೇಶ್ವರರ ಪುಣ್ಯಭೂಮಿಗೆ ನಾನು ಬರಲು ಸಾಧ್ಯವಾಗಿದೆ, ಅವರಿಗೆ ನನ್ನ ನಮನಗಳು. ಜಗತ್ತಿನಲ್ಲಿ ಪ್ರಜಾಪ್ರಭುತ್ವ ಹುಟ್ಟಿದ್ದು ಈ ಪುಣ್ಯಭೂಮಿಯಲ್ಲಿ. ನಾವೆಲ್ಲರೂ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ನಿರತರಾಗಿದ್ದೇವೆ. ಕಾಂಗ್ರೆಸ್ ಕರ್ನಾಟಕ ಮತ್ತು ದೇಶವನ್ನು ಸರ್ವನಾಶ ಮಾಡಿದ್ದು, ಮಹಾತ್ಮಾ ಗಾಂಧೀಜಿಯವರ ಕಾಂಗ್ರೆಸ್ ಅನ್ನು ಕೊನೆಗಾಣಿಸುವ ಕನಸನ್ನು ಈ ಚುನಾವಣೆಯಲ್ಲಿ ಖರ್ಗೆಯವರ ನೇತೃತ್ವದಲ್ಲಿ ಮಾಡಲಾಗುವುದು ಎಂದು ಜನರು ನಿರ್ಧರಿಸಿದ್ದಾರೆ.
ಪಂಡಿತ್ ಜವಾಹರ್ ಲಾಲ್ ನೆಹರೂ ಅವರು ಮಹಾತ್ಮ ಗಾಂಧೀಜಿಯವರ ಮಾತನ್ನು ಕೇಳಲಿಲ್ಲ, ಆದರೆ ರಾಹುಲ್ ಗಾಂಧಿಯವರು ಮಹಾತ್ಮ ಗಾಂಧೀಜಿಯವರ ಮಹಾನ್ ಭಕ್ತ, ಅವರು ಕಾಂಗ್ರೆಸ್ ಅನ್ನು ಕೊನೆಗೊಳಿಸುತ್ತಾರೆ ಎಂದು ವಿಶ್ಲೇಷಿಸಿದರು. ರಾಹುಲ್ ಗಾಂಧಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದ ಅವರು, ಬನಾರಸ್ನಲ್ಲಿ ಮಕ್ಕಳು ಮದ್ಯಪಾನ ಮಾಡಿ ಕುಣಿದು ಕುಪ್ಪಳಿಸುತ್ತಾರೆ ಎಂಬಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರನ್ನು ಅವಮಾನಿಸುತ್ತಿದ್ದೀರಿ? ಸಾಮಾನ್ಯ ಪ್ರಜೆಯನ್ನು ಅವಮಾನಿಸುವುದು ಇಷ್ಟು ದೊಡ್ಡ ನಾಯಕನಿಗೆ ಸರಿಹೋಗುತ್ತದೆಯೇ? ಎಂದು ಪ್ರಶ್ನಿಸಿದರು.
ಖರ್ಗೆಯವರ ಶಕ್ತಿಹೀನ ನಾಯಕತ್ವ:
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಿವರಾಜ್ ಸಿಂಗ್ ಚೌಹಾಣ್, ಇತ್ತೀಚಿನ ದಿನಗಳಲ್ಲಿ ಖರ್ಗೆ ಅವರು ತುಂಬಾ ಅಸಮಾಧಾನಗೊಂಡಿದ್ದಾರೆ ಮತ್ತು ಜನರು ಏಕೆ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದು ಕೇಳುತ್ತಿದ್ದಾರೆ. ಖರ್ಗೆ ಜೀ, ನೀವು ರಾಷ್ಟ್ರೀಯ ಅಧ್ಯಕ್ಷರಾದಾಗಿನಿಂದ ಕಾಂಗ್ರೆಸ್ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಹಾಗಾಗಿಯೇ ದಿನವೂ ಯಾರೋ ಒಬ್ಬರು ಕಾಂಗ್ರೆಸ್ ತೊರೆಯುತ್ತಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಶಕ್ತಿ ಇಲ್ಲ, ಜನರ ಆಶಾಭಾವನೆಗೆ ಧಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯಂತಹ ನಾಯಕರು ಮಾತ್ರ ಕಾಂಗ್ರೆಸ್ನಲ್ಲಿ ಉಳಿಯುತ್ತಾರೆ ಹೊರತು ಬೇರೆ ಯಾರೂ ಉಳಿಯುವುದಿಲ್ಲ. ಕಾಂಗ್ರೆಸ್ ಹಾಳು ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದ ಅವರು, ಈಗ ಕಾಂಗ್ರೆಸ್ ಅಂತ್ಯ ಕಾಣುತ್ತಿದೆ ಎಂದು ತಿಳಿಸಿದರು.