ಬೆಂಗಳೂರು, ಫೆ 22 (DajiworldNews/AA): ಕೊಲ್ಲಿ ರಾಷ್ಟ್ರ ಸೇರಿ ವಿವಿಧೆಡೆ ನೆಲೆಸಿರುವ ಅನಿವಾಸಿ ಕನ್ನಡಿಗರ ಯೋಗಕ್ಷೇಮ ಹಾಗೂ ಅಭಿವೃದ್ದಿಗಾಗಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಈಗಾಗಲೇ ಅನಿವಾಸಿ ಭಾರತೀಯರ ಯೋಗಕ್ಷೇಮಕ್ಕಾಗಿ ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳು ಮುಂದಾಗಿದೆ. ಕರ್ನಾಟಕದ ಆರ್ಥಿಕತೆಯ ಮೇಲೆಯೂ ಸ್ಥೂಲ ಪರಿಣಾಮ ಉಂಟುಮಾಡುವುದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಹೇಳಿದರು.
ಅನಿವಾಸಿ ಭಾರತೀಯರು 4 ದಶಕಗಳಿಂದ ಉದ್ಯೋಗಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದರಿಂದ ರಾಜ್ಯದ ವಿವಿಧ ಸ್ಥಳಗಳಲ್ಲಿ ಆರ್ಥಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಬದಲಾವಣೆಗಳಾಗಿವೆ. ಸದ್ಯ ಸೌದಿ ಅರೇಬಿಯಾ ಹಾಗೂ ಇತರೆ ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 1.34 ಕೋಟಿ ಭಾರತೀಯರು ನೆಲೆಸಿದ್ದಾರೆ. ಇವರಲ್ಲಿ ಇವರಲ್ಲಿ 88.8 ಲಕ್ಷ ಮಂದಿ ಯುಎಇ, ಸೌದಿ ಅರೇಬಿಯಾ, ಕುವೈತ್, ಬಹ್ರೈನ್, ಕತಾರ್ ಮತ್ತು ಒಮನ್ ಮುಂತಾದ 6 ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ. ಸೌದಿ ಅರೇಬಿಯಾ ಒಂದರಲ್ಲೇ ಸುಮಾರು 24 ಲಕ್ಷ ಮಂದಿ ಅನಿವಾಸಿ ಭಾರತೀಯರು ನೆಲೆಸಿದ್ದಾರೆ. ನಮ್ಮ ರಾಜ್ಯದ ಹಲವಾರು ಕುಟುಂಬಗಳು ನೆಲೆಸಿವೆ. ಅದರಲ್ಲೂ ಕರಾವಳಿ ಭಾಗದ ಹಲವು ಕುಟುಂಬಗಳಿಗೆ ಇಲ್ಲಿನ ಆದಾಯ ಮುಖ್ಯವಾಗಿದೆ ಎಂದರು.