ಬಳ್ಳಾರಿ,ಏ 27(Daijiworld News/MSP): ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ಕಳೆದ 2 ತಿಂಗಳಿಂದ ನ್ಯಾಯಾಂಗ ವಶದಲ್ಲಿದ್ದು ಷರತ್ತುಬದ್ಧ ಜಾಮೀನಿನ ಮೇಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಏ. 27 ರ ಶನಿವಾರ ಬೆಳಗ್ಗೆ ವಿಜಯನಗರ ಶಾಸಕ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಶಾಸಕ ಗಣೇಶ್ ಅವರಿಗೆ ತಪ್ಪಿನ ಅರಿವು ಆಗಿದ್ದು, ಹೀಗಾಗಿ ಆನಂದ್ ಸಿಂಗ್ ಅವರ ಬಳಿ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ಬಳ್ಳಾರಿಯ ಹೊಸಪೇಟೆಯಲ್ಲಿರುವ ವೇಣುಗೋಪಾಲ ದೇವಸ್ಥಾನದಲ್ಲಿ ಭೇಟಿ ಮಾಡಿದ ಗಣೇಶ್, ಶಾಸಕ ಆನಂದ ಸಿಂಗ್ ಅವರ ತಂದೆ ಪೃಥ್ವಿರಾಜ್ ಸಿಂಗ್ ಅವರ ಕಾಲು ಹಿಡಿದು ನಮಸ್ಕರಿಸಿದ್ದಾರೆ. ಮಾತ್ರವಲ್ಲದೆ ಘಟನೆಯ ಬಗ್ಗೆ ನನಗೆ ಪಶ್ಚಾತಾಪವಿದೆ ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡಿದ್ದಾರೆ ಎನ್ನಲಾಗಿದೆ.
ಪೂರ್ವ ನಿರ್ಧಾರದಂತೆ ಗಣೇಶ್ ಅವರು ಕೃಷ್ಣ ದೇವಾಲಯಕ್ಕೆ ಹೋಗಿದ್ದು ಅಲ್ಲಿಗೆ ಆನಂದ್ ಸಿಂಗ್ ಅವರು ತಮ್ಮ ತಂದೆಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದರು. ಈ ಸಂದರ್ಭ ಒಂದು ಗಂಟೆಗೂ ಹೆಚ್ಚು ಹೊತ್ತು ಮಾತುಕತೆ ನಡೆದಿದ್ದು, "ಆಕಸ್ಮಿಕವಾಗಿ ತಪ್ಪು ನಡೆದಿದೆ ಕ್ಷಮಿಸಿ" ಎಂದು ಪಶ್ಚಾತಾಪದಿಂದ ಗಣೇಶ್ ಕ್ಷಮೆ ಯಾಚಿಸಿದ್ದಾರೆ ಎನ್ನಲಾಗಿದೆ. ಕಮಲಪುರ ಮೂಲದ ಆನಂದ್ ಸಿಂಗ್ ಅವರ ಪರಮಾಪ್ತ ಸಮೀವುಲ್ಲಾ ಮಧ್ಯಸ್ಥಿಕೆಯಿಂದಾಗ ಈ ಸಂಧಾನ ಭೇಟಿ ಸಾಧ್ಯವಾಗಿದ್ದು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.
ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಜನವರಿ 20ರಂದು ತಡರಾತ್ರಿ ಕುಡಿದ ಅಮಲಿನಲ್ಲಿ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಆನಂದ್ ಸಿಂಗ್ ಆಸ್ಪತ್ರೆ ಸೇರಿದ್ದರು. ಜ. 21ರಂದು ಗಣೇಶ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ದಾಖಲಾದ ದಿನದಿಂದಲೇ ಗಣೇಶ್ ಅವರು ತಲೆಮರೆಸಿಕೊಂಡಿದ್ದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು.