ಕೇರಳ,ಏ27(Daijiworld News/AZM): ಹಿಂದೂ ಮಹಾಸಾಗರದ ಭಾಗ ಸೇರಿ ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣವಾಗಿರುವ ಫಾನಿ ಸೈಕ್ಲೋನ್ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಕೇರಳದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಹವಾಮಾನ ಇಲಾಖೆ ಸೂಚನೆಯಂತೆ ಏ. 29ಕ್ಕೆ ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಸೈಕ್ಲೋನ್ ಪ್ರಭಾವ ಬೀರಲಿದೆ. ಏಪ್ರಿಲ್ 30ಕ್ಕೆ ಕೇರಳದ 8 ಜಿಲ್ಲೆಗಳಲ್ಲಿ ಅಂದರೆ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೊಟ್ಟಾಯಂ, ವಯನಾಡು, ಕೋಝಿಕ್ಕೋಡ್, ಪಾಲಕ್ಕಾಡ್ ಜಿಲ್ಲೆಗಳಿಗೆ ಪ್ರವೇಶ ಮಾಡುವ ಮುನ್ಸೂಚನೆ ಇರುವುದರಿಂದ ಈ ಪ್ರದೇಶಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ಫಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕೇರಳದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲದೇ ತಮಿಳುನಾಡು, ಕೇರಳ ಕರಾವಳಿಯಲ್ಲಿ ಭಾರೀ ಹಾನಿ ಸಾಧ್ಯತೆ ಇರುವುದಾಗಿ ತಿಳಿಸಿದೆ.
ಫಾನಿ ಚಂಡಮಾರುತ ಶುರುವಾದಾಗ ಗಂಟೆಗೆ 90-115 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಕೇರಳದಲ್ಲಿ ಗಂಟೆಗೆ 50 ಕಿಮೀ ವೇಗದಲ್ಲಿ ಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಲಾಗಿದೆ. ಪರಿಣಾಮ ತಮಿಳುನಾಡು, ಪುದುಚೇರಿಯಲ್ಲಿ ಭಾರೀ ಗಾಳಿ ಮಳೆಯ ಆಗುವ ಕುರಿತು ಅಂದಾಜಿಸಲಾಗಿದೆ. ಫಾನಿ ಚಂಡಮಾರುತದ ಬಿಸಿ ರಾಜ್ಯಕ್ಕೂ ತಟ್ಟಲಿದ್ದು, ಏ.28ರ ನಂತರ ಮೇ 2ರ ವರೆಗೂ ಹಳೆ ಮೈಸೂರು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನದಲ್ಲಿ ಚಂಡಮಾರುತ ಪರಿಣಾಮ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಇತ್ತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.