ನವದೆಹಲಿ, ಫೆ 22(DaijiworldNews/SK): ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಪೋಸ್ಟ್ ಗಳನ್ನು ಹಾಗೂ ಖಾತೆಗಳನ್ನು ತೆರವುಗೊಳಿಸುವಂತೆ ಭಾರತ ಸರ್ಕಾರ ಎಲಾನ್ ಮಸ್ಕ್ ಒಡೆತನದ ಎಕ್ಸ್ ಸಂಸ್ಥೆಗೆ ಆದೇಶ ನೀಡಿದೆ.ಆದರೆ ಈ ಕ್ರಮಕ್ಕೆ ತಾವು ಒಪ್ಪುವುದಿಲ್ಲ ಎಂದು ಎಲಾನ್ ಮಸ್ಕ್ ಮಾಲೀಕತ್ವದ 'ಎಕ್ಸ್' ತಿಳಿಸಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್ ಒಡೆತನದ ಎಕ್ಸ್ ಸಂಸ್ಥೆ, ಕೆಲವು ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್ಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವು ತಮಗೆ ಆದೇಶ'ಗಳನ್ನು ನೀಡಿದೆ. ಈ ಪೋಸ್ಟ್ಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವು ಅನ್ವಯವಾಗುವುದರಿಂದ ಇಂತಹ ಕ್ರಮಗಳನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದೆ.
ಕೇಂದ್ರದ ಆದೇಶವನ್ನು ಪಾಲಿಸುವ ಸಲುವಾಗಿ, ಈ ಖಾತೆಗಳು ಹಾಗೂ ಪೋಸ್ಟ್ಗಳನ್ನು ಭಾರತದಲ್ಲಿ ಮಾತ್ರ ನಾವು ತಡೆಹಿಡಿಯಲಿದ್ದೇವೆ. ಭಾರತ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಆದೇಶ ಇನ್ನಷ್ಟೇ ಹೊರಬೀಳಬೇಕಾಗಿದೆ ಎಂದು ವರದಿಯಾಗಿದೆ.