ಚಿಕ್ಕಬಳ್ಳಾಪುರ, ಫೆ 22(DaijiworldNews/SK): ಮಾಜಿ ಸಚಿವ ಡಾ.ಕೆ ಸುಧಾಕರ್ ಬಿಜೆಪಿಯಿಂದ ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುವ ಬಗ್ಗೆ ಸಂಶಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ ಎಂದು ಎಲ್ಲೆಡೆ ಊಹಾಪೋಹಗಳು ಹಬ್ಬಿದವು. ಇದೀಗ ಈ ವಿಚಾರವಾಗಿ ಡಾ.ಕೆ ಸುಧಾಕರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಕೆ ಸುಧಾಕರ್ ಅವರು, ಬಿಜೆಪಿ ತೊರೆದು ಬೇರೆ ಪಕ್ಷವನ್ನು ಸೇರುವ ಯೋಚನೆ, ಉದ್ದೇಶ ಅಥವಾ ಅವಶ್ಯಕತೆಯಾಗಲಿ ನನಗೆ ಈ ವರೆಗೆ ಬಂದಿಲ್ಲ. ಇನ್ನು ನಾನು ಪಕ್ಷ ತೆರೆಯುವ ನಿರ್ಧಾರ ಮಾಡಿದ್ದೇನೆ ಎಂಬ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.
ಇನ್ನು ಈ ವಿಚಾರವಾಗಿ ಡಿಸಿಎಂ ಹಂತದಲ್ಲಿ ಚರ್ಚೆ ನಡೆದಿದೆ ಎಂದು ಸಹ ಹೇಳಲಾಗುತಿತ್ತು. ರಾಜಕೀಯ ವಲಯದಲ್ಲಿನ ಚರ್ಚೆಗಳಿಂದ ಕೇಳಿಬರುತ್ತಿರುವ ಸುದ್ದಿಗಳಿಂದ ಎಚ್ಚೆತ್ತ ಸುಧಾಕರ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಆದರೆ ಸುಧಾಕರ್ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಸಲ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗುವ ಸಮಯದಲ್ಲೂ ನಾನು ಕಾಂಗ್ರೆಸ್ ಬಿಡಲ್ಲ ಅಂತಲೇ ಸುಧಾಕರ್ ಬಿಜೆಪಿ ಜೊತೆ ಸೇರಿಕೊಂಡಿದ್ದರು. ಇದೀಗ ಈ ಹೇಳಿಕೆಯನ್ನು ಹೇಗೆ ನಂಬುವುದು ಎಂದು ಪ್ರಶ್ನಿಸಿದ್ದಾರೆ.