ಬೆಂಗಳೂರು,ಏ27(Daijiworld News/AZM):ಪ್ರವಾಸಕ್ಕೆ ಬಂದಿರುವ ಒಂದೇ ಕುಟುಂಬದ ಐವರು ದಾಬಸ್ ಪೇಟೆ ಸಮೀಪದ ಸಿದ್ದರಬೆಟ್ಟ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ.
ಮೃತಪಟ್ಟವರು ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ರೇಷ್ಮಾ(22), ಮುನೀರ್ ಖಾನ್(49), ಯಾರಬ್ ಖಾನ್(21), ಮುಬೀನ್ ತಾಜ್ (21), ಸಲ್ಮಾನ್ ಎಂದು ಗುರುತಿಸಲಾಗಿದೆ.
ಸಿದ್ದರಬೆಟ್ಟದ ಬಳಿ ಇರುವ ಮಸೀದಿಗೆ ಇಂದು ಬೆಳಗ್ಗೆ ಪಾರ್ಥನೆ ಸಲ್ಲಿಸಲು ಈ ಕುಟುಂಬ ಬಂದಿತ್ತು. ಈ ವೇಳೆ ಅಲ್ಲಿನ ಸಮೀಪದ ಕಲ್ಯಾಣಿಯಲ್ಲಿ ಬಾಲಕ ಉಸ್ಮಾನ್ ಖಾನ್ ಕೈ ತೊಳೆಯಲು ಹೋದಾಗ ಅಲ್ಲಿ ಜಾರಿ ಬಿದ್ದಿದ್ದಾನೆ. ಇದನ್ನು ಕಂಡ ಉಳಿದವರು ಆತನನ್ನು ರಕ್ಷಿಸಲು ಒಬ್ಬರ ನಂತರ ಒಬ್ಬರು ಕಲ್ಯಾಣಿಯಲ್ಲಿ ಇಳಿದಾಗ ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದಾಬಸ್ಪೇಟೆ ಪೊಲೀಸರು ತಿಳಿಸಿದ್ದಾರೆ.
ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.