ಬೆಂಗಳೂರು, ಫೆ 23(DaijiworldNews/SK): ಈಗಾಗಲೇ ಹಲವು ಪ್ರದೇಶಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಆದರೆ ಇಲ್ಲಿವರೆಗೆ ರೈತರಿಗೆ ಸೂಕ್ತ ಪರಹಾರ ದೊರೆತ್ತಿಲ್ಲ. ಇನ್ನಾದರೂ ತೀವ್ರ ಬರ ಇರುವ ಹಿನ್ನಲೆಯಲ್ಲಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮನವಿ ಮಾಡಿದ್ದಾರೆ.
ಈ ಬಗ್ಗೆ ವಿಧಾನಸಭೆ ಅಧಿವೇಶನದ ಬಜೆಟ್ ನ ಕುರಿತು ನಡೆದ ಚರ್ಚೆ ಸಂದರ್ಭ ಮಾತನಾಡಿದ ಅವರು, ಸರಕಾರದ 5 ಗ್ಯಾರಂಟಿಗಾಗಿ ಹಣ ಕ್ರೋಢಿಕರಿಸಲು ಪರದಾಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿ ಅಭಿವೃದ್ಧಿಗಾಗಿ ಅನುದಾನ ನೀಡಲು ನಿರಾಕರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಕುಂಟಿತಗೊಂಡು ರಾಜ್ಯದ ಎಲ್ಲಾ ಶಾಸಕರು ಪರದಾಡುವ ಸಮಸ್ಯೆ ಎದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಗೋದಾವರಿ ಜಲಾನಯನದ ನೀರಿನ ಸದ್ಬಳಕೆ ಮಾಡಿಕೊಂಡು ರೈತರಿಗೆ ಅನುಕೂಲ ಕಲ್ಪಿಸುವ ರೈತರ ಬೇಡಿಕೆಗೆ ಮನ್ನಣೆ ನೀಡಿಲ್ಲ. ಸುಮಾರು ವರ್ಷದಿಂದ ನಮ್ಮ ಭಾಗದ ರೈತರು ಭೂಮಿ ಕಳೆದುಕೊಂಡು ಹೋರಾಟ ನಡೆಸುತ್ತಿರುವ ಕಾರಂಜಾ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಇದರೊಂದಿಗೆ ಕಾರಂಜಾ ಸಂತ್ರಸ್ತರ ರೈತರ ಸಮಸ್ಯೆ ಕುರಿತು ಉಪ ಮುಖ್ಯಮಂತ್ರಿಗಳು ಸಭೆ ನಡೆಸಿದರು ಈ ಬಜೆಟ್ನಲ್ಲಿ ಸಮಸ್ಯೆ ಕುರಿತು ಸ್ಪಷ್ಟತೆ ದೊರೆತ್ತಿಲ್ಲ ಎಂದು ತಿಳಿಸಿದ್ದಾರೆ.