ಬೆಂಗಳೂರು, ಫೆ 23(DaijiworldNews/AA): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಸ್ಥಿತಿಗತಿಯ ಬಗ್ಗೆ ಚೆನ್ನಾಗಿ ತಿಳಿದಿದೆ. ಈವರೆಗೆ 15 ಬಜೆಟ್ ಗಳನ್ನು ಮಂಡಿಸಿರುವ ಅವರು ದಡ್ಡರಾಗಿರುವುದು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, 1994-95 ಸಾಲಿನಲ್ಲಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿ ಮೊದಲ ಬಜೆಟ್ ಮಂಡಿಸಿದಾಗ ರಾಜ್ಯದ ಹಣಕಾಸು ಸ್ಥಿತಿ ಚೆನ್ನಾಗಿತ್ತು. ಆದರೆ ಅವರ ಅವಧಿ ಮುಗಿಯುವ ವೇಳೆಗೆ ರಾಜ್ಯ ಸಾಲದ ಸುಳಿಗೆ ಸಿಲುಕಿತ್ತು ಎಂದು ಸಿದ್ಧರಾಮಯ್ಯ ಅವರನ್ನು ಹಾಗೂ ಈ ಬಾರಿ ಮಂಡಿಸಿದ ಬಜೆಟ್ ಅನ್ನು ಟೀಕಿಸಿದರು.
ಸಿದ್ದರಾಮಯ್ಯ 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗಲೂ ರಾಜ್ಯದ ಮೇಲೆ ಸಾಲದ ಹೊರೆ ಇರಲಿಲ್ಲ. ಆದರೆ 2018ರಲ್ಲಿ ಅವರ ಅವಧಿ ಮುಗಿದಾಗ ರಾಜ್ಯದ ಸಾಲ ಬೆಟ್ಟದಷ್ಟಾಗಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ 2ನೇ ಅವಧಿಯಲ್ಲೂ ಅವರು ಈ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.