ಹುಬ್ಬಳ್ಳಿ, ಫೆ 23(DaijiworldNews/AA): ಅಯೋಧ್ಯೆಗೆ ಹೋಗಿ ಬಂದ್ರೆ ತಪ್ಪೇನು? ಕೆಲವರು ಮೆಕ್ಕಾ-ಮದೀನಾಕ್ಕೂ ಹೋಗುತ್ತಾರೆ. ಈ ರೀತಿ ಧಮ್ಕಿ ಹಾಕಿದವರನ್ನು ಹಿಡಿದು ಒದ್ದು ಒಳಗೆ ಹಾಕಬೇಕು. ಸರ್ಕಾರ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಯಾತ್ರಿಕರ ರೈಲಿನಲ್ಲಿ ನಡೆದ ಗಲಾಟೆಯು ಕಾಂಗ್ರೆಸ್ ಪಕ್ಷದ ತುಷ್ಟೀಕರಣ ರಾಜಕಾರಣದ ಫಲವಾಗಿದೆ. ಕಾಂಗ್ರೆಸ್ ನೊಂದಿಗೆ ತುಷ್ಟೀಕರಣದ ಕೆಲವು ಪಕ್ಷಗಳು ಈ ರೀತಿ ಮಾಡುತ್ತಿದೆ. ವೋಟ್ ಬ್ಯಾಂಕ್ ಗಾಗಿ ಈ ರೀತಿಯ ಘಟನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಯಾರಿಗೂ ಈ ರೀತಿಯ ಉತ್ತೇಜನ ನೀಡಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಇರುವ ತನಕ ಕೆಜಿ ಹಳ್ಳಿ, ಡಿಜೆ ಹಳ್ಳಿಯಂತಹ ಪ್ರಕರಣದ ಹಾಗೆ ಏನು ಬೇಕಾದರೂ ಮಾಡಬಹುದೆಂಬ ಧೈರ್ಯ ಅವರಿಗಿದೆ. ಹುಬ್ಬಳ್ಳಿ ಗಲಭೆ ಪ್ರಕರಣದ ಅರೋಪಿಗಳಿಗೂ ಪತ್ರ ಬರೆದು ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಸರ್ಕಾರ ಇರುವುದರಿಂದ ಏನು ಬೇಕಾದರೂ ಮಾಡಬಹುದೆಂಬ ಮಾನಸಿಕತೆ ಬೆಳೆದಿದೆ ಎಂದರು.