ಬೆಂಗಳೂರು, ಫೆ 23(DaijiworldNews/AK): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೂಡ 4 ತಂಡಗಳನ್ನು ಮಾಡಿ ಮುಂದಿನ ವಾರದಿಂದ ಆ ಎಲ್ಲ ತಂಡಗಳು ಪ್ರವಾಸ ಪ್ರಾರಂಭಿಸಲಿವೆ. ಕೇಂದ್ರದ ನಾಯಕರು ಜೊತೆಗೂಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದ ಉಸ್ತುವಾರಿ ರಾಧಾಮೋಹನ್ದಾಸ್ ಅಗರ್ವಾಲ್ ಅವರು ಇವತ್ತಿನ ಸಭೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಪ್ರಮುಖರ ವಿಶೇಷ ಸಭೆ ನಡೆಸಲಾಗಿದೆ ಎಂದು ವಿವರಿಸಿದರು.
ಪ್ರತಿಯೊಂದು ಲೋಕಸಭಾ ಕ್ಷೇತ್ರಗಳ ಅತ್ಯಂತ ತಳಮಟ್ಟದ ವರದಿಯ ಕುರಿತು ವಿಸ್ತಾರ ಚರ್ಚೆ ಆಗಿದೆ. ಆಂತರಿಕ ವರದಿ ಪ್ರಕಾರ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವಂಥ ಸ್ಥಿತಿ ಇದೆ. ತಳಮಟ್ಟದಲ್ಲಿ ಪಕ್ಷದ ಚಟುವಟಿಕೆಗಳು, ರಾಜ್ಯ ನಾಯಕರ ಲೋಕಸಭಾ ಕ್ಷೇತ್ರವಾರು ಪ್ರವಾಸ ಮತ್ತು ಕೇಂದ್ರದ ನಾಯಕರು ರಾಜ್ಯ ಪ್ರವಾಸ ಮಾಡಿದಾಗ ಕಾರ್ಯಕ್ರಮ ಮತ್ತು ಚಟುವಟಿಕೆಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಕೇಂದ್ರದ ನಾಯಕರು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಂದು ದಿನದ ಪ್ರವಾಸ ಇಟ್ಟುಕೊಳ್ಳಲಿದ್ದಾರೆ. ಅಲ್ಲಿ 5 ಹಂತದ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು. ಪಕ್ಷದ ಎಲ್ಲ ಕಾರ್ಯಕರ್ತರು ಕೂಡ ಚುನಾವಣೆಗೆ ಸಜ್ಜಾಗಿದ್ದಾರೆ ಎಂದು ಹೇಳಿದರು.ಬೂತ್ ಅಧ್ಯಕ್ಷ, ಬೂತ್ ಪ್ರಮುಖ ಫಲಾನುಭವಿ ಸಂಪರ್ಕ, ಅವರ ನೇತೃತ್ವದ ಸಭೆ, ಚುನಾವಣಾ ನಿರ್ವಹಣಾ ಸಮಿತಿಯ ಸಭೆ, ಫಲಾನುಭವಿಗಳ ಸಂಪರ್ಕದ ಸಭೆ, ಲೋಕಸಭಾ ವ್ಯಾಪ್ತಿಯಲ್ಲಿ ಸಾಮಾಜಿಕವಾಗಿ ತಮ್ಮದೇ ಆದ ವ್ಯಕ್ತಿತ್ವದ ಮೂಲಕ ಕೊಡುಗೆ ಕೊಟ್ಟವರ ಮನೆ ಭೇಟಿ, ಸಾರ್ವಜನಿಕ ಸಭೆ ನಡೆಸಲಾಗುವುದು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಕ್ಲಸ್ಟರ್ ಮಟ್ಟದ ಪ್ರವಾಸ ಈಗಾಗಲೇ ಆರಂಭವಾಗಿದೆ. 2 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿ ಇರುವ ಕಲಬುರ್ಗಿ ಕ್ಲಸ್ಟರ್ಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈಗಾಗಲೇ ಬಂದು ಸಭೆ ನಡೆಸಿ ತೆರಳಿದ್ದಾರೆ. ಕ್ಲಸ್ಟರ್ ಭೇಟಿ ದಿನಾಂಕಗಳು ಶೀಘ್ರವೇ ನಿಗದಿ ಆಗಲಿದ್ದು, ನಿಗದಿಯಾದ ಕೇಂದ್ರ ನಾಯಕರು ಒಂದು ದಿನ ಕಾಲಾವಕಾಶವನ್ನು ಸಂಪೂರ್ಣವಾಗಿ ಕ್ಲಸ್ಟರ್ಗೆ ಮೀಸಲಿಡಲಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.ಈಗಾಗಲೇ ಕೇಂದ್ರದ ನಾಯಕರು ತಮ್ಮದೇ ಆದ ಸಮೀಕ್ಷೆಯ ಮೂಲಕ ವರದಿ ನೀಡಿದ್ದಾರೆ. ಎಲ್ಲ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದಿದ್ದಾರೆ. ಯಾವ ಲೋಕಸಭಾ ಕ್ಷೇತ್ರದಲ್ಲೂ ಗೊಂದಲ ಇಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.