ಒಡಿಶಾ, ಫೆ 24(DaijiworldNews/AA): ಸಾಮಾನ್ಯವಾಗಿ ಯುಪಿಎಸ್ಸಿ ಬರೆಯುವ ಅಭ್ಯರ್ಥಿಗಳಿಗೆ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಕೆಲವರು ಮಾತ್ರ ಮೊದಲ ಪ್ರಯತ್ನದಲ್ಲೇ ಉತ್ತಮ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗುತ್ತಾರೆ. ಹೀಗೆ ತನ್ನ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾದ ಐಎಎಸ್ ಅಧಿಕಾರಿ ಅನನ್ಯಾ ದಾಸ್ ಅವರ ಸ್ಪೂರ್ತಿದಾಯಕ ಕತೆ ಇದು.
ಮೂಲತಃ ಒಡಿಶಾದವರಾದ ಅನನ್ಯಾ ದಾಸ್ ಅವರು 1992 ರ ಮೇ 15ರಂದು ಜನಿಸಿದ್ದು, ಅವರ ತಂದೆ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಉದ್ಯೋಗಿಯಾಗಿದ್ದಾರೆ.
ಅನನ್ಯಾ ಅವರು ಬಾಂಬೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಪದವಿಯನ್ನು ಪೂರ್ಣಗೊಳಿಸಿರುತ್ತಾರೆ. ಬಳಿಕ ಅವರು ಪಿಲಾನಿಯ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಫ್ ಸೈನ್ಸ್ (ಬಿಐಟಿಎಸ್)ಯಲ್ಲಿ ಅರ್ಥಶಾಸ್ತ್ರದಲ್ಲಿ ತಮ್ಮ ಎಂಎಸ್ ಸಿ ಪದವಿಯನ್ನು ಪಡೆಯುತ್ತಾರೆ.
ಇನ್ನು ಬಿಟೆಕ್ ಮುಗಿಸಿದ ನಂತರ ಅನನ್ಯಾ ದಾಸ್ ಅವರು ಅಲ್ಪಾವಧಿಗೆ ಮಲ್ಟಿನ್ಯಾಷನಲ್ ಕಾರ್ಪೋರೇಷನ್ ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಬಳಿಕ ಜೈಪುರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ನಲ್ಲಿ ಎಕ್ಸಿಕ್ಯೂಟಿವ್ ಇಂಟರ್ನ್ ಆಗಿ 3 ತಿಂಗಳು ಕೆಲಸ ನಿರ್ವಹಿಸುತ್ತಾರೆ. ಜೊತೆಗೆ ’ಫೈನಾನ್ ಶಿಯಲ್ ಕಂಟೇಜನ್ ಆಂಡ್ ರೆಗ್ಯುಲಾರಿಟಿ ರೆಸ್ಪೋನ್ಸಸ್’ ಎಂಬ ವಿಷಯದ ಬಗ್ಗೆ ಪ್ರಬಂಧವೊಂದನ್ನು ಬರೆದಿದ್ದು, ಈ ಪ್ರಬಂಧವನ್ನು ದಿ ಇಂಡಿಯನ್ ಬ್ಯಾಂಕರ್ ಪ್ರಕಟಿಸಿತ್ತು.
ಅನನ್ಯಾ ದಾಸ್ ಅವರು ಹಲವಾರು ಕಡೆಗಳಲ್ಲಿ ಉದ್ಯೋಗ ಮಾಡಿದ ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಬಳಿಕ ತನ್ನ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಪರೀಕ್ಷೆಗಾಗಿ ತಯಾರಿಯನ್ನು ನಡೆಸುತ್ತಾರೆ. ಇದರ ಫಲವಾಗಿ 2015 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅನನ್ಯಾ ಅವರು 16ನೇ ಅಖಿಲ ಭಾರತ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ.