ಫತೇಪುರ್, ಫೆ 25(DaijiworldNews/MS): ಆನ್ಲೈನ್ ಗೇಮಿಂಗ್ನ ಚಟಕ್ಕೆ ಬಿದ್ದ ವ್ಯಕ್ತಿಯೋರ್ವ ತನ್ನ ತಾಯಿಯ ಜೀವ ವಿಮೆ ಪಾವತಿಯನ್ನು ಕ್ಲೈಮ್ ಮಾಡಿ ತನ್ನ ಸಾಲವನ್ನು ತೀರಿಸಲು ಹೆತ್ತಾಕೆಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಫತೇಪುರ್ನಲ್ಲಿ ನಡೆದಿದೆ.
ಆರೋಪಿ ಹಿಮಾಂಶು ₹ 50 ಲಕ್ಷ ವಿಮೆ ಪಡೆಯಲು ತನ್ನ ತಾಯಿಯನ್ನು ಕೊಂದು ನಂತರ ಆಕೆಯ ಶವವನ್ನು ಯಮುನಾ ನದಿ ದಡದ ಬಳಿ ಎಸೆದುಬಂದಿದ್ದಾನೆ.
ಆರೋಪಿ ಝುಪಿ ಆಪ್ ನಲ್ಲಿ ಆನ್ಲೈನ್ ಗೇಮಿಂಗ್ ಚಟ ಹೊಂದಿದ್ದು, ಸಾಲ ಮಾಡಿಯೂ ಆಟವಾಡುತ್ತಿದ್ದ. ಹೀಗಾಗಿ ₹ 4 ಲಕ್ಷ ಸಾಲ ಮಾಡಿದ್ದು, ಸಾಲಗಾರರಿಗೆ ಹಣ ಮರುಪಾವತಿ ಮಾಡಲು, ನಿರ್ದಯ ಸಂಚು ರೂಪಿಸಿದ್ದ. ಇದಕ್ಕಾಗಿ ಹಿಮಾಂಶು, ತನ್ನ ತಂದೆಯ ಚಿಕ್ಕಮ್ಮನ ಚಿನ್ನಾಭರಣಗಳನ್ನು ಕದ್ದೊಯ್ದು, ತನ್ನ ಹೆತ್ತವರ ಹೆಸರಿನಲ್ಲಿ ತಲಾ ₹ 50 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿ ಮಾಡಿಸಿದ್ದಾನೆ. ಇದಾದ ಕೆಲವೇ ದಿನಗಳಲ್ಲಿ, ತಂದೆ ಇಲ್ಲದಿದ್ದಾಗ ತಾಯಿ ಪ್ರಭಾ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಬಳಿಕ ಮೃತದೇಹವನ್ನು ಸೆಣಬಿನ ಚೀಲದಲ್ಲಿ ಹಾಕಿ ಟ್ರ್ಯಾಕ್ಟರ್ ನಲ್ಲಿ ಸಾಗಿಸಿ ಯಮುನಾ ನದಿ ಬಳಿ ಎಸೆದು ಬಂದಿದ್ದಾನೆ.
ಹಿಮಾಂಶುವಿನ ತಂದೆ ರೋಷನ್ ಸಿಂಗ್ ಮನೆಗೆ ಹಿಂತಿರುಗಿದ ಪತ್ನಿ ಮತ್ತು ಮಗ ಕಾಣಿಸಿದಾದಗ ಬಹಳಾಷ್ಟು ಹುಡುಕಾಡಿದಾಗ ಹಿಮಾಂಶುವನ್ನು ಯಾರೋ ಟ್ರ್ಯಾಕ್ಟರ್ನಲ್ಲಿ ನದಿಯ ಬಳಿ ನೋಡಿದ್ದಾಗಿ ತಿಳಿಸಿದ್ದಾರೆ.
ತಾಯಿಯನ್ನು ಕೊಂದ ಹಿಮಾಂಶು ಪರಾರಿಯಾಗಿದ್ದು, ಪೊಲೀಸ್ ತನಿಖೆ ವೇಳೆ ಆಘಾತಕಾರಿ ಸಂಚು ಬಹಿರಂಗವಾಗಿದೆ.