ರಾಮನಗರ, ಫೆ 25(DajiworldNews/SK): ನಮ್ಮ ಸರ್ಕಾರ ಚುನಾವಣೆಯಲ್ಲಿ ಗೆದ್ದರೆ 2 ಸಾವಿರ ರೂಪಾಯಿ ನೀಡುವುದಾಗಿ ಭರವಸೆಯನ್ನು ನೀಡಿತ್ತು. ಅದೇ ರೀತಿ ಮಾತಿಗೆ ತಪ್ಪದೇ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಆದರೆ ಮೋದಿ ನಿಮ್ಮ ಖಾತೆಗೆ 5 ಲಕ್ಷ ರೂ. ಹಣ ಕೊಡ್ತೀನಿ ಎಂದ್ರಲ್ಲಾ 15 ರೂ. ಕೊಟ್ರಾ ಎಂದು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಗೃಹಲಕ್ಷ್ಮೀ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆ ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆಯಾಗಿ ಪರಿವರ್ತನೆಯಾಗಿದೆ ಎಂದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಅವರು ಅಮಿತ್ ಶಾ ಅವರ ಬಳಿ ಹೋಗಿ ನಾವು ಹೆಚ್ಚು ಸ್ಥಾನ ಗೆದ್ದು ಗ್ಯಾರಂಟಿ ನಿಲ್ಲಿಸದಿದ್ದರೆ ಮುಂದಿನ 9 ವರ್ಷ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅವರಿಗೆ ಗ್ಯಾರಂಟಿ ಮೇಲೆ ಎಷ್ಟು ಭಯ ಇದೆ ನೋಡಿ. ಇದು ಶ್ರೀಮಂತರ ಸರ್ಕಾರ ಅಲ್ಲ ಬಡವರ ಸರ್ಕಾರ. ಅದಕ್ಕಾಗಿ ನಿಮಗೆ ಗ್ಯಾರಂಟಿ ಕೊಡ್ತಿರೋದು. ಗ್ಯಾರಂಟಿ ಮುಂದುವರಿಸಿ ಅನ್ನೋದಾದ್ರೆ ಲೋಕಸಭೆಯಲ್ಲೂ ನಮಗೆ ಆಶೀರ್ವಾದ ಮಾಡಬೇಕು ಎಂದು ತಿಳಿಸಿದ್ದಾರೆ.