ಮುಂಬೈ, ಫೆ 26(DaijiworldNews/MS): ಮೋಸ್ಟ್ ವಾಂಟೆಡ್ ಉಗ್ರಗಾಮಿ, ನಿಷೇಧಿತ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯ ಹನೀಫ್ ಶೇಖ್ನನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ಫೆ 22ರಂದು ಬಂಧಿಸಿದೆ. 22 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆತನನ್ನು ಕೇವಲ ಒಂದು ಸುಳಿವಿನ ನೆರವಿನಿಂದ ಪೊಲೀಸರು ಬಂಧಿಸಿದ್ದಾರೆ.
ಉಗ್ರ ಹನೀಫ್ ಶೇಖ್ ಬಗ್ಗೆ ಪೊಲೀಸರ ಬಳಿ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೂ 22ವರ್ಷಗಳಿಂದ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಹನೀಫ್ ಸಿಮಿ ಸಂಘಟನೆಯ ನಿಯತಕಾಲಿಕೆ ಇಸ್ಲಾಮಿಕ್ ಮೂವ್ಮೆಂಟ್ (ಉರ್ದು ಆವೃತ್ತಿ) ಸಂಪಾದಕನಾಗಿದ್ದ. ಈ ವೇಳೆ ಆತನ ಹನೀಫ್ ಹುದೈ ಎಂದು ಗುತುತಿಸಿಕೊಂಡಿದ್ದು ಈ ಹೆಸರಿನ ಒಂದೇ ಒಂದು ಸುಳಿವಿನ ನೆರವಿನಿಂದ ಪೊಲೀಸರು ಬಂಧಿಸಿದ್ದಾರೆ.
ಈತನನ್ನು ತಲೆಮರೆಸಿಕೊಂಡಿರುವ ಅಪರಾಧಿ ಎಂದು 2002ರಲ್ಲಿ ಘೋಷಿಸಲಾಗಿತ್ತು. ಅದರ ನಂತರ ಆತ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಆರೋಪಿಯು ಕಳೆದ 25 ವರ್ಷಗಳ ಅವಧಿಯಲ್ಲಿ ಯುವಕರಿಗೆ ಮೂಲಭೂತವಾದದ ಬಗ್ಗೆ ಪ್ರಚೋದನೆ ನೀಡಿದ್ದ. ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ ಅಡಿ ಅಪರಾಧಗಳು ಹಾಗೂ ದೇಶ ದ್ರೋಹ ಆರೋಪಗಳ ಅಡಿ ದಿಲ್ಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ 2001ರಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಯು ಮಹಾರಾಷ್ಟ್ರದ ಭುಸವಾಲ್ ಎಂಬ ಗ್ರಾಮದಲ್ಲಿ ನೆಲೆಸಿ ಉರ್ದು ಶಾಲೆಯೊಂದರಲ್ಲಿ ಮಾರುವೇಷದಲ್ಲಿ ಪಾಠ ಮಾಡುತ್ತಾ, ಸದ್ದಿಲ್ಲದೇ ಮುಸ್ಲಿಂ ಸಮುದಾಯದ ಹಲವು ಯುವಕರಿಗೆ ಪ್ರಚೋದನೆ ನೀಡುತ್ತಿದ್ದ. ಈತ ಮೂಲತಃ ಮಹಾರಾಷ್ಟ್ರದ ಜಲಂಗಾವ್ ಗೆ ಸೇರಿದವ.
ಫೆಬ್ರವರಿ 22 ರಂದು ಮೊಹಮ್ಮದ್ದೀನ್ ನಗರದಿಂದ ಖಡ್ಕ ರಸ್ತೆ ಕಡೆಗೆ ಬರುತ್ತಿದ್ದ ಆರೋಪಿಯನ್ನು ಮಹಾರಾಷ್ಟ್ರದ ಭೂಸಾವಲ್ ಖಡ್ಕ ರಸ್ತೆಯ ಆಶಾ ಟವರ್ ಬಳಿ ಪೊಲೀಸರ ತಂಡವು ಮುತ್ತಿಗೆ ಸೆರೆ ಹಿಡಿದಿದೆ ಎಂದು ಅಂಕಿತ್ ಸಿಂಗ್ ಹೇಳಿದ್ದಾರೆ.