ಮೈಸೂರು, ಎ28(Daijiworld News/SS): ಕಳೆದ ಕೆಲ ದಿನಗಳ ಹಿಂದೆ ವಿಶ್ವ ವಿಖ್ಯಾತ ಮೈಸೂರು ದಸರಾ ಗಜಪಡೆಯ ಆನೆ ದ್ರೋಣ ಸಾವಿಗೀಡಾಗಿತ್ತು. ನೀರು ಕುಡಿಯುವ ವೇಳೆಯಲ್ಲಿ ಆನೆ ಕುಸಿದು ಬಿದ್ದು ಸಾವನ್ನಪ್ಪಿದೆ ಎಂದು ಶಿಬಿರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಪಶುವೈದ್ಯರು ಆನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಹೇಳಿದ್ದಾರೆ. ಈ ವಿಭಿನ್ನ ಹೇಳಿಕೆ ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ದಸರಾ ಆನೆ ದ್ರೋಣ ಸಾವಿಗೂ ಮುನ್ನ ನರಳಿ- ನರಳಿ ಪ್ರಾಣ ಬಿಟ್ಟಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆಯ ನರಳಾಟ ಕಂಡ ಮಾವುತರು ತಮ್ಮ ಮೊಬೈಲ್ ಮೂಲಕ ದ್ರೋಣನ ಸಾವಿನ ಕೊನೆಯ ಕ್ಷಣದ ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾರೆ. ಇದರ ಆಧಾರದ ಮೇಲೆ ಇದೀಗ ದ್ರೋಣನ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗುತ್ತಿವೆ. ಮಾತ್ರವಲ್ಲ, ದ್ರೋಣನ ಸಾವು ಅನುಮಾನಕ್ಕೆ ಕಾರಣವಾಗಿದೆ.
ಈ ನಡುವೆ ದ್ರೋಣ ಆನೆಯ ಸಾವು ಅಸಹಜ ಎಂದು ಹೇಳಿರುವ ಶಿಬಿರದ ಅಧಿಕಾರಿಗಳು, ಆ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ನಾಗರಹೊಳೆ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ನಾರಾಯಣಸ್ವಾಮಿಯವರು ದ್ರೋಣನ ಸಾವು ಮೇಲ್ನೋಟಕ್ಕೆ ಹೃದಯಾಘಾತದಿಂದ ಸಂಭವಿಸಿರಬಹುದು. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ.
ಈ ಕುರಿತು ಸತ್ಯಾಂಶ ತಿಳಿದು ವರದಿ ಮಾಡುವಂತೆ ಮೈಸೂರಿನ ಪಶು ವೈದ್ಯಾಧಿಕಾರಿ ನಾಗರಾಜ್ ಅವರನ್ನು ನೇಮಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.