ಹುಬ್ಬಳ್ಳಿ, ಫೆ 28 (DaijiworldNews/HR): ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಬೆಂಬಲ ಹಾಗೂ ಧೈರ್ಯದಿಂದ ದೇಶದ್ರೋಹ ಶಕ್ತಿಗಳು ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಘೋಷಣೆ ಕೂಗೂವಂತಾಗಿದ್ದು, ಇಂತಹ ಸರ್ಕಾರವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಕಿತ್ತೊಗೆಯುವುದು ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಬ್ಯಾಂಕ್ ಓಲೈಕೆ ರಾಜಕಾರಣದ ಮುಸುಕನ್ನು ಮುಖ್ಯಮಂತ್ರಿ ಹೊದ್ದುಕೊಂಡಿರುವುದೇ ದೇಶದ್ರೋಹಿಗಳಿಗೆ ದೊಡ್ಡ ಬಲ ಬಂದಂತಾಗಿದೆ ಎಂದರು.
ಇನ್ನು ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಕರ್ನಾಟಕದಲ್ಲಿ 15 ಸ್ಲೀಪರ್ ಸೆಲ್ ಗಳ ವಿರುದ್ಧ ಕ್ರಮ ಕೈಗೊಂಡು ಹಲವರನ್ನು ಜೈಲಿಗೆ ಕಳುಹಿಸಲಾಗಿತ್ತು. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ, ಹುಬ್ಬಳ್ಳಿ ಹಾಗೂ ಮಂಗಳೂರು ಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೆವು. ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ ಅಲ್ಲಿ ಇಲ್ಲಿ, ಸಾಮಾಜಿಕ ಜಾಲತಾಣದಲ್ಲಿ ದೇಶದ್ರೋಹ ಹೇಳಿಕೆ ನೀಡುತ್ತಿದ್ದವರು ಇದೀಗ ನೇರವಾಗಿ ವಿಧಾನಸೌಧದಲ್ಲೆ ಘೋಷಣೆ ಕೂಗುವಂತಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.