ನವದೆಹಲಿ, ಫೆ 29(DaijiworldNews/AA): ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭೆ ಚುನಾವಣೆ ಬೆನ್ನಲ್ಲೇ ಪ್ರಾರಂಭವಾಗಿದ್ದ ರಾಜಕೀಯ ಗೊಂದಲಕ್ಕೆ ಇಂದು ತೆರೆಬಿದ್ದಿದೆ. 6 ಮಂದಿ ಕಾಂಗ್ರೆಸ್ ಶಾಸಕರ ಬಂಡಾಯದಿಂದಾಗಿ ಪತನದ ಅಂಚಿಗೆ ತಲುಪಿದ್ದ ಸಿಎಂ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ ನ ಮಧ್ಯಸ್ಥಿಕೆಯಿಂದ ಬಚಾವಾಗಿದೆ.
ಹಿಮಾಚಲ ಪ್ರದೇಶದಲ್ಲಿ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಈ 6 ಕಾಂಗ್ರೆಸ್ ಶಾಸಕರು ಅಡ್ಡಮತದಾನ ಮಾಡಿ ಬಿಜೆಪಿಯ ಗೆಲುವಿಗೆ ಕಾರಣರಾಗಿದ್ದರು. ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಈ ಕಾಂಗ್ರೆಸ್ ಶಾಸಕರು ಇದೀಗ ಶಿಮ್ಲಾಕ್ಕೆ ಮರಳಿದ್ದು, ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದಾರೆ. ಈ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ.
ಇನ್ನು ಈ 6 ಕಾಂಗ್ರೆಸ್ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿ ಪಕ್ಷದ ಸೋಲಿಗೆ ಕಾರಣರಾಗಿದ್ದರು. ಈ ಮೂಲಕ ಹಿಮಾಚಲ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟಾಗಿತ್ತು. ಅಷ್ಟೇ ಅಲ್ಲದೇ ಈ ಶಾಸಕರು ಅಜ್ಞಾತ ಸ್ಥಳಕ್ಕೆ ತೆರಳುವ ಮೂಲಕ ಆಪರೇಷನ್ ಕಮಲದ ಭೀತಿ ಕಾಂಗ್ರೆಸ್ ನಲ್ಲಿ ಎದುರಾಗಿತ್ತು.