ಬೆಂಗಳೂರು, ಮಾ 1(DaijiworldNews/AK): ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಆರೋಪದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶಂಕಿತನೊಬ್ಬನನ್ನು ವಶಕ್ಕೆ ಪಡೆದು ಆತನ ಧ್ವನಿಮುದ್ರಿಕೆಯನ್ನು ಪೊಲೀಸರು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದರು.
ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಡಾ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸುತ್ತಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಘಟನೆಯ ಉದ್ದೇಶಿತ ವೀಡಿಯೊಗಳನ್ನು ಟಿವಿ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ್ದವು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಎಲ್ಲಾ ಸುದ್ದಿವಾಹಿನಿಗಳ ವಿಡಿಯೊಗಳನ್ನು ಕಳುಹಿಸಲಾಗಿದ್ದು ಅವುಗಳನ್ನು ಪರೀಕ್ಷೆ ಮಾಡಿ ವರದಿ ಬರುವಾಗ ಸ್ವಲ್ಪ ತಡವಾಗಬಹುದು ಎಂದರು.
ಆದಷ್ಟು ಬೇಗ ವರದಿ ಕೇಳಿದ್ದೇವೆ. ಎಫ್ಎಸ್ಎಲ್ ಗೆ ನೀಡಲಾದ ವೀಡಿಯೊಗಳು ಒಂದು ಚಾನಲ್ ಅಥವಾ ಒಂದು ಕ್ಲಿಪ್ನಿಂದ ಅಲ್ಲ. ಹಲವಾರು ಕ್ಲಿಪ್ಪಿಂಗ್ಗಳನ್ನು ಭದ್ರಪಡಿಸಿ ಎಫ್ಎಸ್ಎಲ್ಗೆ ನೀಡಲಾಗಿದೆ. ವರದಿ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.