ನವದೆಹಲಿ,ಏ28(DaijiworldNews/AZM):ದ.ಭಾರತದ ಕರಾವಳಿ ಪ್ರದೇಶಗಳಿಗೆ ಮತ್ತು ಚಂಡಮಾರುತದ ಭೀತಿ ಎದ್ದಿದ್ದು, ಇಂದು ರಾತ್ರಿಯಿಂದಲೇ ತೀವ್ರಗೊಳ್ಳಲಿದೆ ಹಾಗೂ ಮಂಗಳವಾರ ಸಂಜೆ ವೇಳೆಗೆ ತಮಿಳುನಾಡು ಹಾಗೂ ಆಂಧ್ರ ಪ್ರದೇಶಕ್ಕೆ ಈ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾಯಭಾರ ಕುಸಿತದಿಂದ ಹಿಂದೂ ಮಹಾಸಾಗರದ ಪೂರ್ವ ಭಾಗ ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಹುಟ್ಟಿಕೊಂಡಿರುವ ಫಣಿ ಚಂಡಮಾರುತ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಇಂದು ರಾತ್ರಿಯೇ ಚಂಡಮಾರುತ ಬಿರುಗಾಳಿಯಾಗಿ ತೀವ್ರಗೊಳ್ಳಲಿದೆ.ಈಗಾಗಲೇ ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪದಲ್ಲಿ ಚಂಡಮಾರುತದ ಪ್ರಭಾವ ಕಾಣಿಸಿಕೊಂಡಿದೆ. ಸದ್ಯಕ್ಕೆ ಚೆನ್ನೈನ ಆಗ್ನೇಯದಿಂದ 1,050 ಕಿಲೋ ಮೀಟರ್ ಹಾಗೂ ಆಂಧ್ರದ ಮಚಲಿಪಟ್ಟಣದಿಂದ 1,230 ಕಿಲೋ ಮೀಟರ್ ದೂರದಲ್ಲಿದೆ. ವಾಯುವ್ಯ ದಿಕ್ಕಿನ ಕಡೆ ನುಗ್ಗುತ್ತಿರುವ ಈ ಚಂಡಮಾರುತ, ಗಂಟೆಗೆ 16 ಕಿಲೋಮೀಟರ್ ವೇಗದಲ್ಲಿ ಸಾಗುತ್ತಿದೆ. ಆದ್ರೆ, ಮಂಗಳವಾರದ ನಂತರ ಈಶಾನ್ಯ ದಿಕ್ಕಿನತ್ತ ಮಾರ್ಗ ಬದಲಿಸುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಅನ್ವಯ ನಾಳೆ ಮತ್ತು ನಾಡಿದ್ದು ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರಲಿದೆ. ಸೋಮವಾರ ಹಾಗೂ ಮಂಗಳವಾರ ಕೇರಳದ ಹಲವೆಡೆ ಸಾಧಾರಣ ಹಾಗೂ ಭಾರೀ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ.
ಫನಿ ಚಂಡಮಾರುತ ಪ್ರಭಾವ ರಾಜ್ಯಕ್ಕೂ ತಟ್ಟಲಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಹಳೆ ಮೈಸೂರು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಗಂಟೆಗೆ 40ರಿಂದ 50ಕಿ.ಮೀ. ವೇಗದ ಗಾಳಿಯೊಂದಿಗೆ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಅಲ್ಲಲ್ಲಿ ಸಿಡಿಲು ಬಡಿಯುವ ಸಂಭವವೂ ಇದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.