ಬೆಂಗಳೂರು, ಮಾ 02(DaijiworldNews/AK): ಮತಾಂಧತೆಯ ಅತಿರೇಕದ ಪರಿಣಾಮವಾಗಿ ಪಾಕಿಸ್ತಾನದ ಪ್ರೀತಿಯನ್ನು ಬೆಳಗಾವಿ, ವಿಧಾನಸೌಧದಲ್ಲಿ ವ್ಯಕ್ತಪಡಿಸಲಾಗಿದೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆಗಿತ್ತು. ಈಗ ಬೆಂಗಳೂರಿನಲ್ಲಿ ಎಲ್ಇಡಿ ಬಾಂಬ್ ಸ್ಫೋಟ ಆಗಿದೆ. ಕಳೆದ 11 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸಣ್ಣ- ದೊಡ್ಡದು ಸೇರಿ ಆರು ಸ್ಫೋಟಗಳಾಗಿವೆ. ಇದು ಸರಣಿ ಸ್ಫೋಟದ ಪ್ರಯೋಗಾರ್ಥ ತಯಾರಿ ಎಂದು ಅನುಮಾನ ಮೂಡುವಂತಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆಗ್ರಹಿಸಿದರು.
ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕ ಸರಕಾರವು ಬಾಂಬ್ ಸ್ಫೋಟದ ಕುರಿತ ಸಮಗ್ರ ತನಿಖೆಯನ್ನು ಎನ್.ಐ.ಎ.ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಬ್ರ್ಯಾಂಡ್ ಬೆಂಗಳೂರಿಗೆ ಬಾಂಬ್ ಭೀತಿ ಎದುರಾಗಿದೆ. ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟವು ಸರಣಿ ಸ್ಫೋಟದ ಪರೀಕ್ಷಾರ್ಥ ಸ್ಫೋಟ ಅಥವಾ ರಿಹರ್ಸಲ್ ಇರಬಹುದು ಎಂದು ಅವರು ಆರೋಪಿಸಿದರು. ಸರಣಿ ಸ್ಫೋಟದ ಮುನ್ಸೂಚನೆ ಇದಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಕರ್ನಾಟಕವನ್ನು ಭಯೋತ್ಪಾದಕರು ಸ್ಲೀಪರ್ ಸೆಲ್ ಆಗಿ ಮಾಡಿಕೊಂಡದ್ದು ಹೊಸತಲ್ಲ. ತರಬೇತಿ ಕೇಂದ್ರವಾಗಿಯೂ ಕರ್ನಾಟಕವನ್ನು ಬಳಸಿಕೊಂಡಿದ್ದಾರೆ. ಕೊಪ್ಪದಲ್ಲಿ ಹಿಂದೆ ಬಂದೂಕು, ಬಾಂಬ್ ತಯಾರಿಸುವ ತರಬೇತಿ ಕೊಡಲಾಗುತ್ತಿತ್ತು. ತೀರ್ಥಹಳ್ಳಿಯಲ್ಲಿ ಕುಕ್ಕರ್ ಬಾಂಬ್ ತಯಾರಿಸಲಾಗುತ್ತಿತ್ತು. ಕೊಡಗಿನಲ್ಲೂ ಭಯೋತ್ಪಾದಕರಿಗೆ ತರಬೇತಿ ಕೊಡಲಾಗುತ್ತಿತ್ತು ಎಂದು ತಿಳಿಸಿದರು. ಈ ಎಲ್ಲ ಮಾಹಿತಿ ಸರಕಾರದ ಬಳಿ ಇದೆ ಎಂದು ವಿವರಿಸಿದರು.
ದೇಶದ ಉತ್ತರ ಭಾಗದಲ್ಲಿ ಬಾಂಬ್ ಸ್ಫೋಟದ ಸದ್ದು ಕ್ಷೀಣವಾಗಿದೆ; ಬಹುತೇಕ ನಿಂತುಹೋಗಿದೆ. ಭಾರತದ ದಕ್ಷಿಣ ಭಾಗದಲ್ಲಿ ಕೇರಳ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಬಾಂಬ್ ಸದ್ದು ಕೇಳಿಸುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.