ಬೆಂಗಳೂರು,ಮಾ 02 (DaijiworldNews/ AK): ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಅವರು ಇಂದು ಬಿಜೆಪಿ ಸೇರ್ಪಡೆಗೊಂಡರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಹಸೀಲ್ದಾರ್ ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಹಿಂದುಳಿದ ವರ್ಗದ ಧುರೀಣರು ಬಿಜೆಪಿ ಸೇರಿದ್ದರಿಂದ ಹಾವೇರಿ ಜಿಲ್ಲೆಗೆ ಒಂದು ದೊಡ್ಡ ಶಕ್ತಿ ಲಭಿಸಿದೆ. ಇದು ಬಹಳ ಸಂತೋಷ ತಂದುಕೊಟ್ಟಿದೆ ಎಂದು ಬಿ.ವೈ ವಿಜಯೇಂದ್ರ ಅವರು ತಿಳಿಸಿದರು.ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕು; ನರೇಂದ್ರ ಮೋದಿಜೀ ಅವರು ಮಗದೊಮ್ಮೆ ಪ್ರಧಾನಿ ಆಗಬೇಕೆಂಬ ಇಚ್ಛೆ ದೇಶ- ರಾಜ್ಯದ ಜನರಲ್ಲಿದೆ ಎಂದು ವಿಶ್ಲೇಷಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ನರೇಂದ್ರ ಮೋದಿಜೀ ಅವರು ಕೊಟ್ಟ ಜನಪರ ಯೋಜನೆಗಳು, ಬಡವರು, ರೈತರು, ಹಿಂದುಳಿದ ವರ್ಗ, ದೀನದಲಿತರು, ಪರಿಶಿಷ್ಟ ಜಾತಿ- ಪಂಗಡಗಳ ಜನತೆಯ ಪರವಾಗಿ ಕೊಟ್ಟ ಯೋಜನೆಗಳಿಂದ ಜನರು ಬಿಜೆಪಿಯನ್ನೇ ಬೆಂಬಲಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮೋದಿಜೀ ಅವರ 10 ವರ್ಷಗಳ ಆಡಳಿತದ ಪ್ರಭಾವದಿಂದ ಭಾರತವು ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 2047ರ ಹೊತ್ತಿಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಕಾಣಲಿದೆ ಎಂಬ ಸಂಕಲ್ಪದೊಂದಿಗೆ ಪ್ರಧಾನಿಯವರು ಹಗಲು, ರಾತ್ರಿ ದೇಶಕ್ಕಾಗಿ ಶ್ರಮ ಹಾಕುತ್ತಿದ್ದಾರೆ ಎಂದರು.
ಕರ್ನಾಟಕದ ಹೊಸ ಸರಕಾರ, ಕಾಂಗ್ರೆಸ್ ಸರಕಾರವು ಕೇವಲ 9 ತಿಂಗಳಲ್ಲಿ ತನ್ನ ಜನಪ್ರಿಯತೆಯನ್ನು ಕಳಕೊಂಡಿದೆ. ಬಡವರು, ರೈತರು, ದಲಿತರ ಪರ ಕಾಳಜಿ ಇಲ್ಲದ ಸರಕಾರ ಇದು. ಇದು ಜನವಿರೋಧಿ ಸರಕಾರವಾಗಿದೆ ಎಂದು ಟೀಕಿಸಿದರು.ಹಿರಿಯರಾದ ತಹಸೀಲ್ದಾರ್ ಅವರು ಪಕ್ಷ ಸೇರಿದ್ದು ಸಂತಸ ತಂದಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ತಹಸೀಲ್ದಾರ್ ಅವರ ಸೇರ್ಪಡೆಯಿಂದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಿಜೆಪಿಗೆ ದೊಡ್ಡ ಶಕ್ತಿ ಲಭಿಸಿದೆ ಹಾಗೂ ಹಾವೇರಿ ಜಿಲ್ಲೆಯ ರಾಜಕಾರಣಕ್ಕೆ ದೊಡ್ಡ ಬಲ ಬಂದಿದೆ ಎಂದು ತಿಳಿಸಿದರು.
ಮನೋಹರ್ ತಹಸೀಲ್ದಾರ್ ಅವರು ಮಾತನಾಡಿ, ತಮ್ಮ ಬಿಜೆಪಿ ಸೇರ್ಪಡೆಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರಣಕರ್ತರು. ‘ಊಟ ಮಾಡಿ ಎಲೆಯನ್ನು ಬಿಸಾಡಿದ ಹಾಗೆ’ ಕಾಂಗ್ರೆಸ್ನಲ್ಲಿ ತಮಗಾದ ಅನ್ಯಾಯವನ್ನು ಗ್ರಹಿಸಿದ ಅವರು ಬಿಜೆಪಿಗೆ ಆಹ್ವಾನ ನೀಡಿದ್ದನ್ನು ವಿವರಿಸಿದರು. ಕಾಂಗ್ರೆಸ್ ಪಕ್ಷದವರು ತಮ್ಮ ಮಗನಿಗೂ ಅನ್ಯಾಯ ಮಾಡಿದ್ದನ್ನು ತಿಳಿಸಿದರು.
ಎಂಎಲ್ಸಿ ಮಾಡುವುದೂ ಸೇರಿದಂತೆ ಭರವಸೆ ಈಡೇರಲಿಲ್ಲ; ಇದರಿಂದ ನಿರಾಸೆಯಾದುದನ್ನೂ ತಿಳಿಸಿದರು.ನಿರಂತರ 45 ವರ್ಷದ ಸೇವೆಗೆ ಬೆಲೆ ಇಲ್ಲದುದರಿಂದ ಬೇಸರಗೊಂಡೆ. ಇಲ್ಲಿ ಎಂಪಿ, ಎಂಎಲ್ಎ ಟಿಕೆಟ್, ಸ್ಥಾನಮಾನ ಕೇಳಿಲ್ಲ. ಗೌರವಯುತವಾಗಿ ಇರಲು ಅವಕಾಶ ಕೋರಿದ್ದೇನೆ ಎಂದು ಅವರು ವಿವರಿಸಿದರು. ತಾಲ್ಲೂಕು ಬಿಜೆಪಿ ಮುಖಂಡರ ಒಪ್ಪಿಗೆ ಪಡೆದು ಬಿಜೆಪಿ ಸೇರಿದ್ದೇನೆ ಎಂದು ಹೇಳಿದರು.