ವಿಜಯಪುರ, ಮಾ 02(DaijiworldNews/AA): ಕಾಂಗ್ರೆಸ್ ಸರ್ಕಾರಕ್ಕೆ ಜನರ ಪ್ರಾಣಗಳ ಬಗ್ಗೆ ಕಾಳಜಿಯೇ ಇದ್ದಂತಿಲ್ಲ. ಕೇವಲ ತನ್ನ ಗ್ಯಾರಂಟಿಗಳ ಬಗ್ಗೆ ಹೇಳಿಕೊಂಡು ಸಾಗುತ್ತಿದೆ. ಕಾಂಗ್ರೆಸ್ ನ ಗ್ಯಾರಂಟಿಗಳ ಭರದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ನಿಲ್ಲಿಸಲಾಗದಿದ್ದರೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ವಿಧಾನಸಭೆಯನ್ನು ವಿಸರ್ಜಿಸಬೇಕು. ಸಿದ್ದರಾಮಯ್ಯ ನೇತೃತ್ವದ ಪ್ರಮುಖ ಸಚಿವರೊಬ್ಬರು ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡುವ ಬಗ್ಗೆ ಮಾತನಾಡಿದ್ದಿದ್ದರು. ಆಗಲೇ ನಾನು ಅದು ಬ್ರ್ಯಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಆಗಲಿದೆ ಎಂದು ಹೇಳಿದ್ದೆ. ಅದು ಈಗ ಸಾಬೀತಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಕುಕ್ಕರ್ ಬ್ಲಾಸ್ಟ್ ಪ್ರಕರಣ ನಡೆದಾಗಲೂ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಉಡಾಫೆ ಮಾಡಿದ್ದರು. ಬಳಿಕ ಈ ಪ್ರಕರಣವು ಭಯೋತ್ಪಾದಕ ಚಟುವಟಿಕೆಗಳ ಭಾಗವಾಗಿದೆ ಎಂದು ಸಾಬೀತಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ