ಕಾಸರಗೋಡು,ಏ 29 (Daijiworld News/MSP): ಈಸ್ಟರ್ ಭಾನುವಾರದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕೈಗೆತ್ತಿಗೊಂಡಿದೆ.
ಕೇರಳದ ಕೆಲವು ಮಂದಿ ವಿದೇಶಕ್ಕೆ ತೆರಳಿರುವ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು ಭಾನುವಾರ ಕಾಸರಗೋಡು ಹಾಗೂ ಪಾಲಕ್ಕಾಡ್ ನಲ್ಲಿರುವ ಮೂವರ ಮನೆಗಳ ಮೇಲೆ ದಾಳಿ ನಡೆಸಿದೆ. ಮಾತ್ರವಲ್ಲದೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಕಾಸರಗೋಡಿನಲ್ಲಿರುವ ಎರಡು ಮನೆಗಳಿಗೆ ದಾಳಿ ನಡೆಸಿದ್ದು ದಾಳಿಯಲ್ಲಿ ಭಾಗಿಯಾದ ಉಗ್ರ ಸಂಘಟನೆ ಜೊತೆ ಕಾಸರಗೋಡಿನ ಇಬ್ಬರಿಗೆ ನಂಟು ಇದೆ ಎಂಬ ಮಾಹಿತಿಯಂತೆ ಕೊಚ್ಚಿಯಿಂದ ಆಗಮಿಸಿದ ಎನ್ಐಎ ತಂಡವು ನಗರ ಹೊರವಲಯದ ವಿದ್ಯಾನಗರದಲ್ಲಿರುವ ಮನೆಗಳಿಗೆ ದಾಳಿ ನಡೆಸಿದ್ದು, ಈ ವೇಳೆ ಮೊಬೈಲ್ ಫೋನ್ ಮತ್ತು ದಾಖಲೆಗಳನ್ನು ತಂಡವು ವಶಕ್ಕೆ ತೆಗೆದುಕೊಂಡಿದೆ. ಭಾನುವಾರ ಬೆಳಿಗ್ಗೆ ತಂಡವು ದಾಳಿ ನಡೆಸಿದ್ದು, ರಹಸ್ಯವಾಗಿ ನಡೆದ ದಾಳಿ ಬಗ್ಗೆ ಸ್ಥಳೀಯ ಪೊಲೀಸರಿಗೆ ಸೇರಿದಂತೆ ಯಾರಿಗೂ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲು ಶಂಕಿತ ವ್ಯಕ್ತಿಗಳಾದ ಅಬೂಬಕ್ಕರ್ ಸಿದ್ದಿಕ್ ಮತ್ತು ಅಹಮ್ಮದ್ ಅರಾಫತ್ ಗೆ ಎನ್ಐಎ ನೋಟಿಸ್ ನೀಡಿದ್ದು , ಇಂದು ಇಬ್ಬರು ಕೊಚ್ಚಿಯ ಎನ್ಐಎ ಕಚೇರಿಗೆ ಹಾಜರಾಗುವಂತೆ ತಿಳಿಸಲಾಗಿದೆ ಎನ್ನಲಾಗಿದೆ. ಶ್ರೀಲಂಕನ್ ಸ್ಪೋಟದ ರೂವಾರಿ ಸರ್ಹಾನ್ ಹಾಶಿಮ್ ನ ನಿಲುವುಗಳನ್ನು ಈ ಇಬ್ಬರು ಹೊಂದಿದ್ದರು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಎನ್ಐಎ ತಂಡವು ದಾಳಿ ನಡೆಸಿದೆ.
ಈತ್ತೀಚೆಗೆ ಕೆಲವು ವರ್ಷಗಳಲ್ಲಿ 21ಕ್ಕೂ ಹೆಚ್ಚು ಜನರು ಕೇರಳದಿಂದ ಸಿರಿಯಾ ಮತ್ತು ಇರಾಕ್ ಗಳಿಗೆ ತೆರಳಿ ಅಲ್ಲಿ ಐಸಿಸ್ ಸಂಪರ್ಕ ಹೊಂದಿದ್ದ ಉಗ್ರ ಸಂಘಟನೆಗೆ ಸೇರಿದ್ದಾರೆ ಎನ್ನಲಾಗಿದೆ.