ಬೆಂಗಳೂರು, ಮಾ 03(DaijiworldNews/AA): ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಅಲ್ಲದೆ ಎನ್ಐಎ ಮತ್ತು ಎನ್ಎಸ್ಜಿ ತಂಡದವರೂ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಮಂತ್ರಿ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಹಿತಿಗಳು ನಮಗೆ ಲಭ್ಯವಾಗಿವೆ. ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ. ಎಫ್ಎಸ್ಎಲ್ನವರು ಈಗಾಗಲೇ ಮಾದರಿಗಳನ್ನು ಸಂಗ್ರಹಿಸಿ ಟೆಕ್ನಿಕಲ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಾಂಬ್ ಸ್ಫೋಟಿಸಿದ ವ್ಯಕ್ತಿಯ ಮಾಹಿತಿ ದೊರೆತಿದೆ. ವ್ಯಕ್ತಿಯನ್ನು ಆದಷ್ಟು ಬೇಗನೆ ಸೆರೆ ಹಿಡಿಯುತ್ತೇವೆ ಎಂದು ಹೇಳಿದರು.
ಇನ್ನು ರಾಮೇಶ್ವರಂ ಕೆಫೆಯವರು 12 ಕಡೆ ಹೊಟೇಲ್ ಪ್ರಾರಂಭಿಸಿದ್ದಾರೆ. ಉದ್ಯಮದಲ್ಲಿ ಬೆಳವಣಿಗೆಯಾಗುತ್ತಿರುವುದನ್ನು ಸಹಿಸಲಾಗದವರು ಈ ರೀತಿಯಾಗಿ ಮಾಡಿರಬಹುದು ಎಂದು ಜನ ಹೇಳುತ್ತಿದ್ದರು. ಇದಲ್ಲದೆ ಲೋಕಸಭೆ ಚುನಾವಣೆ ಸಮಯದಲ್ಲಿ ಯಾವುದಾದರೂ ಸಂಘಟನೆ ಬೆಂಗಳೂರನ್ನು ಅನ್ಸೇಫ್ ನಗರ ಮಾಡಬೇಕೆಂದು ನಗರಕ್ಕೆ ಹೆಚ್ಚಿನ ಹೂಡಿಕೆ ಹರಿದು ಬರುತ್ತಿದ್ದು, ಈ ವೇಳೆ ಹೀಗೆ ಮಾಡಿದರೆ ಬಂಡವಾಳ ಹಾಕುವವರು ಬರುವುದಿಲ್ಲ ಎಂದು ಹೀಗೆ ಮಾಡಿರಬಹುದು. ಅಥವಾ ಬೇರೆ ಯಾವುದೋ ಕಾರಣವಿರಬಹುದು. ಒಟ್ಟಾರೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಎಷ್ಟೇ ಕಷ್ಟವಾದರೂ ಪ್ರಕರಣ ಬೇಧಿಸುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.