ಬೆಂಗಳೂರು, ಮಾ 04 (DaijiworldNews/MS): ಅಬಕಾರಿ ನೀತಿ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ(ಇಡಿ), ನೀಡಿದ ಎಂಟನೇ ಸಮನ್ಸ್ ಗೆ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉತ್ತರವಾಗಿ ಪ್ರತಿಕ್ರಿಯಿಸಿದ್ದಾರೆ. ಸಮನ್ಸ್ "ಕಾನೂನುಬಾಹಿರ" ಎಂದ ಅವರು, ಆದರೂ ತಾವು ಮಾರ್ಚ್ 12 ರ ನಂತರ ಯಾವುದೇ ದಿನಾಂಕದ ನಂತರ ಇಡಿ ಮುಂದೆ ಹಾಜರಾಗಲು ಒಪ್ಪಿಕೊಂಡಿದ್ದಾರೆ.
ಫೆಬ್ರವರಿ 27 ರಂದು ಇಡಿ, ಕೇಜ್ರಿವಾಲ್ ಅವರಿಗೆ ದೆಹಲಿ ಅಬಕಾರಿ ನೀತಿ 2021-22 ಪ್ರಕರಣದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಂಟನೇ ಸಮನ್ಸ್ ಜಾರಿ ಮಾಡಿತ್ತು.
ಕೇಜ್ರಿವಾಲ್ ಅವರು ಮಾರ್ಚ್ 12ರ ಬಳಿಕ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಇನ್ನು ಕೇಜ್ರಿವಾಲ್ ಅವರ ಪ್ರಕ್ರಿಯೆಗೆ ತನಿಖಾ ಸಂಸ್ಥೆ ಅನುಮತಿ ನೀಡಿಲ್ಲ. ನೇರವಾಗಿ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶವಿಲ್ಲ ಎಂದು ಇ.ಡಿ ಹೇಳಿದೆ.
ಈ ನಡುವೆ ಎಎಪಿ ನೇತೃತ್ವದ ದೆಹಲಿ ಸರ್ಕಾರ ಇಂದು 2024-25ರ ಹಣಕಾಸು ವರ್ಷದ 10ನೇ ಬಜೆಟ್ ಮಂಡಿಸಲು ಸಜ್ಜಾಗಿದೆ. ಫೆಬ್ರವರಿ 15ರಂದು ಪ್ರಾರಂಭವಾದ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವು ಮಾರ್ಚ್ 8ರವರೆಗೆ ನಡೆಯಲಿದೆ. ಫೆಬ್ರವರಿ 21ರಂದು ಕೊನೆಗೊಳ್ಳಬೇಕಿದ್ದ ಅಧಿವೇಶನವನ್ನು ಬಳಿಕ ವಿಸ್ತರಿಸಲಾಗಿತ್ತು. ಎಎಪಿ ಸರ್ಕಾರದ ಆಡಳಿತದ ಸುದೀರ್ಘ ವಿಧಾನಸಭಾ ಅಧಿವೇಶನ ಇದಾಗಿದೆ.