ವಿಜಯಪುರ, ಮಾ 04(DaijiworldNews/AK):ಕಾಂಗ್ರೆಸ್ ಸರ್ಕಾರದಲ್ಲಿ 50% ಭ್ರಷ್ಟಾಚಾರ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೇ.13ರಷ್ಟು ಕಮಿಷನ್ ಇಲ್ಲದೆ ಗುತ್ತಿಗೆದಾರರಿಗೆ ಎನ್ಒಸಿ ನೀಡುತ್ತಿಲ್ಲ. ಎಲ್ಲವೂ ಸೇರಿದರೆ ಶೇಕಡಾ 50ರಷ್ಟು ಕಮಿಷನ್ಗೆ ಬಂದು ನಿಲ್ಲುತ್ತದೆ. ನಮ್ಮ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡುತ್ತಿದ್ದರು. ಆದರೆ ಇವರು 50 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಬಿಬಿಎಂಪಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ನಿಮ್ಮ ಸರ್ಕಾರವೇ ಉತ್ತಮ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದರು.
ಬೆಳಗಾವಿಯಲ್ಲಿ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಜಯಪುರ ಲೋಕಸಭಾ ಚುನಾವಣೆ ಟಿಕೆಟ್ ಯಾರಿಗೆ ನೀಡಿದರು ನಾವು ಕೆಲಸ ಮಾಡುತ್ತೇವೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡೋದು ನಮ್ಮ ಗುರಿ ಎಂದು ಹೇಳಿದ್ದಾರೆ.
ಜಿಗಜಿಣಗಿಗೆ ಆಗಲಿ , ಬೇರೆಯಾರೇ ಆಗಲಿ ನಾವು ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ದಲಿತ ಸಮುದಾಯದ ಯುವಕನಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ. ಮೋದಿ ಪ್ರಧಾನಿ ಮಾಡಲು ಎಲ್ಲರೂ ಕೈಜೋಡಿಸಲಿದ್ದೇವೆ ಎಂದಿದ್ದಾರೆ.