ಬೆಂಗಳೂರು, ಮಾ 04 (DaijiworldNews/MS): ಯಾವುದೇ ಸರ್ಕಾರ ಬಂದರೂ ರಾಜಕೀಯದವರ ಸಹವಾಸ ಮಾಡಬೇಡಿ. ರಾಜಕೀಯದಿಂದರ ದೂರವಿರಿ. ಗುತ್ತಿಗೆದಾರರಿಗೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ಕಿರುಕುಳ ಇರುವುದು ನನ್ನ ಗಮನದಲ್ಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅರಮನೆ ಮೈದಾನದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಸಮ್ಮೇಳನದಲ್ಲಿ ಅವರು ಮುಂದಿನ 9 ವರ್ಷಗಳ ಕಾಲ ನಾವೇ ಅಧಿಕಾರದಲ್ಲಿ ಇರುತ್ತೇವೆ. ನಿಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸುವುದು. ನಾವೇ ಪರಿಹಾರ ನೀಡುವುದು. ಈ ವಿಚಾರ ನೆನಪಿನಲ್ಲಿ ಇಟ್ಟುಕೊಳ್ಳಿ.
ಗುತ್ತಿಗೆದಾರರು ಇಲ್ಲದೇ ಸರ್ಕಾರ ನಡೆಸಲು ಸಾಧ್ಯವಿಲ್ಲ. ನಾವು ಸರ್ಕಾರ ನಡೆಸುತ್ತೇವೆ, ನೀವು ಕಾಮಗಾರಿ ನಡೆಸುತ್ತೀರ. ಈ ಎರಡೂ ದೇಶದ ಕೆಲಸಗಳು. ರಾಜ್ಯದ ಅಭಿವೃದ್ಧಿಯ ಭಾಗಗಳು ನೀವೆಲ್ಲ.
ಹಿಂದಿನ ಸರ್ಕಾರ ಸರಿಯಾದ ಯೋಜನೆ ಮಾಡದೆ ನಿಮ್ಮ ಮೇಲೆ ಹೊರೆ ಹಾಕಿದೆ. ನೀರಾವರಿ ಇಲಾಖೆಯ ಬಜೆಟ್ 16 ಸಾವಿರ ಕೋಟಿ ಇದೆ. ಆದರೆ ಕಳೆದ ಬಾರಿ 25 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು. ಒಟ್ಟು ನನ್ನ ಇಲಾಖೆಯಲ್ಲಿ 1 ಲಕ್ಷ 25 ಸಾವಿರ ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ಹೀಗಿದ್ದಾಗ ಗುತ್ತಿಗೆದಾರರು ಕೆಲಸ ಮುಗಿಸುವುದು ಹೇಗೆ?, ಸರ್ಕಾರ ಬಿಲ್ ಪಾವತಿ ಮಾಡುವುದು ಹೇಗೆ? ಈ ಸಮಸ್ಯೆಗಳನ್ನು ಬಗೆಹರಿಸಲು ಗಮನ ಹರಿಸುತ್ತೇವೆ.
ಈ ಬಾರಿ ಅಭಿವೃದ್ಧಿ ಕಾರ್ಯಗಳಿಗೆ ಎಂದು 1.20 ಲಕ್ಷ ಕೋಟಿ ಹಣ ಮೀಸಲಿಟ್ಟಿದ್ದೇವೆ. 3 ಲಕ್ಷ 71 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದು, ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ವೆಚ್ಚವಾಗಲಿದೆ. ನಿಮಗೆ ತೊಂದರೆ ಆಗದಂತೆ ಒಂದಷ್ಟು ಹಣ ಬಿಡುಗಡೆ ಮಾಡಿದ್ದೇವೆ.
ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣ ಸರಿಯಾಗಿ ನೀಡದ ಪರಿಣಾಮ ಹೆಚ್ಚಿನ ತೊಂದರೆಯಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಹಣ ನೀಡುವುದಾಗಿ ಬಜೆಟ್ನಲ್ಲಿಯೇ ಹೇಳಿದರು. ಇದುವರೆಗೂ ಒಂದು ರೂಪಾಯಿ ಬಂದಿಲ್ಲ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಹೇಗೆ ನಡೆಸುವುದು?.
ದೊಡ್ಡ, ದೊಡ್ಡ ಗುತ್ತಿಗೆದಾರರು ಬೃಹತ್ ಮೊತ್ತದ ಪ್ಯಾಕೇಜ್ ಯೋಜನೆಗಳನ್ನು ತೆಗೆದುಕೊಂಡು ತುಂಡು ಗುತ್ತಿಗೆಯಾಗಿ ಸಣ್ಣವರಿಗೆ ನೀಡುತ್ತಿದ್ದಾರೆ. ಈ ಮಾಫಿಯಾವನ್ನು ಪ್ರಾರಂಭ ಮಾಡಿದ್ದೇ ಅಧಿಕಾರಿಗಳು.
ಭ್ರಷ್ಟಾಚಾರದ ಭೂತ ನಿಮಗೂ ಅಂಟಿದೆ, ನಮಗೂ ಅಂಟಿದೆ:
ಗುತ್ತಿಗೆದಾರರು ಪ್ಯಾಕೇಜ್ ಪದ್ದತಿ ರದ್ದು ಮಾಡಬೇಕು. ಬಾಕಿ ಮೊತ್ತ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರ ಕಡಿಮೆ ಮಾಡಬೇಕು ಎನ್ನುವ ನಿಮ್ಮ ಬೇಡಿಕೆಗಳನ್ನು ಪೂರೈಸುವ ಚಿಂತನೆ ಮಾಡಲಾಗುವುದು. ಆದರೆ ಈ ಭ್ರಷ್ಟಾಚಾರದ ಭೂತ ನಿಮಗೂ ಅಂಟಿದೆ, ನಮಗೂ ಅಂಟಿದೆ. ಇಬ್ಬರೂ ಈ ಕಷ್ಟದಿಂದ ಪಾರಾಗಬೇಕಿದೆ.
ಗುತ್ತಿಗೆದಾರರ ಎಲ್ಲಾ ಬೇಡಿಕೆಗಳು ಸರ್ಕಾರದ ಗಮನದಲ್ಲಿದೆ. ನೀವು ಹಣವನ್ನು ಬಡ್ಡಿಗೆ ತಂದು, ಮೀಟರ್ ಬಡ್ಡಿ ಕಟ್ಟುತ್ತಾ, ಆಸ್ತಿಗಳನ್ನು ಅಡವಿಟ್ಟು ಕಾಮಗಾರಿಗಳನ್ನು ಮಾಡಿರುತ್ತೀರ. ನಿಮ್ಮ ಕಷ್ಟ ಸರ್ಕಾರದ ಗಮನದಲ್ಲಿದೆ.
ಎರಡು, ಮೂರು ದಿನಗಳಲ್ಲಿ ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾಗುವ ಸಂಭವವಿದೆ. ಚುನಾವಣೆ ನಂತರ ನಿಮ್ಮ ಬೇಡಿಕೆಗಳ ಬಗ್ಗೆ ಗಮನ ನೀಡಲಾಗುವುದು. ನಮ್ಮ, ನಿಮ್ಮ ಸಂಬಂಧ ಹಾಲು ಜೇನನಂತೆ. ಹಾಲನ್ನು ಕುಡಿಯದೇ ಇರಲು, ಜೇನು ಸವಿಯದೇ ಇರಲು ಸಾಧ್ಯವಿಲ್ಲ. ಒಟ್ಟಿಗೆ ಕುಳಿತು ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ