ಪಶ್ಚಿಮ ಬಂಗಾಳ, ಮಾ 05(DaijiworlNews/AA): ಯುಪಿಎಸ್ಸಿ ಪರೀಕ್ಷೆಯು ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಈ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಹೀಗೆ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಎಫ್ ಎಸ್ ಅಧಿಕಾರಿಯಾದ ತಮಾಲಿ ಸಹಾ ಅವರ ಯಶೋಗಾಥೆ ಇದು.
ತಮಾಲಿ ಮೂಲತಃ ಪಶ್ಚಿಮ ಬಂಗಾಳದವರು. ತನ್ನ ಊರಿನಲ್ಲೇ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಬಳಿಕ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆಯಲು ಕೋಲ್ಕತ್ತಾಗೆ ತೆರಳುತ್ತಾರೆ.
ತಮಾಲಿ ಅವರು ತಾವು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಯುಪಿಎಸ್ಸಿ ಪರೀಕ್ಷೆಯನ್ನು ಉತ್ತೀರ್ಣರಾಗಬೇಕೆಂಬ ಗುರಿಯನ್ನು ಹೊಂದಿದ್ದರು. ಈ ಹಿನ್ನಲೆ 2020 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ತಮಾಲಿ ಅವರು 94ನೇ ರ್ಯಾಂಕ್ ನೊಂದಿಗೆ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಬಳಿಕ ತಮಾಲಿ ತನ್ನ ತವರಾದ ಪಶ್ಚಿಮ ಬಂಗಾಳದಲ್ಲಿ ಐಎಫ್ ಎಸ್ ಅಧಿಕಾರಿಯಾಗಿ ನಿಯೋಜನೆಯಾಗುತ್ತಾರೆ.
ಇನ್ನು ತಮಾಲಿ ಅವರು ಕೇವಲ 23 ನೇ ವಯಸ್ಸಿನಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಇನ್ನು ತಮಾಲಿ ಅವರ ದೃಢಸಂಕಲ್ಪ, ಅಚಲವಾದ ಗುರಿ ಹಾಗೂ ಸಮರ್ಪಣಾ ಮನೋಭಾವ ಹಲವಾರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಪೂರ್ತಿದಾಯಕವಾಗಿದೆ.