ಬೆಂಗಳೂರು, ಮಾ06(DaijiworldNews/AA): ಲೋಕಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಎಲ್ಲಾ ರಾಷ್ಟ್ರೀಯ ಪಕ್ಷಗಳು ಭರದ ತಯಾರಿ ಆರಂಭಿಸಿದೆ. ಈಗಾಗಲೇ ಬಿಜೆಪಿ ತನ್ನ ಪ್ರಥಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂದು 2ನೇ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಇಂದು ಬಿಜೆಪಿಯು ಸಭೆ ನಡೆಸಲಿದ್ದು, 2ನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಅಂತಿಮವಾಗುವ ಸಾಧ್ಯತೆ ಇದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಈ ಬಾರಿ ಲೋಕಸಭೆ ಚುನಾವಾಣೆಗೆ ಮೈತ್ರಿ ಮಾಡಿಕೊಂಡಿರುವುದರಿಂದ ಟಿಕೆಟ್ ಹಂಚಿಕೆ ಕುರಿತಂತೆ ತೀವ್ರ ಕುತೂಹಲವಿದೆ. ಕರ್ನಾಟಕದ ಮಂಡ್ಯ, ಹಾಸನ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್ ಅಂತಿಮವಾಗಲಿದೆ ಎಂಬ ಪ್ರಶ್ನೆ ಮೂಡಿದೆ. ಇನ್ನು ಮಾಜಿ ಸಚಿವರಾದ ವಿ. ಸೋಮಣ್ಣ, ಮಾಧುಸ್ವಾಮಿ, ಸಿ.ಟಿ ರವಿ, ಡಾ. ಕೆ.ಸುಧಾಕರ್, ಬಿ.ಸಿ ಪಾಟೀಲ್ ಮತ್ತಿತರರು ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯದ ಟಿಕೆಟ್ ಹಂಚಿಕೆಯು ಕುತೂಹಲ ಸೃಷ್ಟಿಯಾಗಿದೆ.
ಇನ್ನು ಬಿಜೆಪಿ ಇಂದು ಸಭೆ ನಡೆಸುತ್ತಿರುವ ಬೆನ್ನಲ್ಲೇ ನಾಳೆ ಕಾಂಗ್ರೆಸ್ ಪಕ್ಷ ಸಭೆ ನಡೆಸಲಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾದ ಬೆನ್ನಲ್ಲೇ ಕಾಂಗ್ರೆಸ್, ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸುವ ಸಿದ್ಧತೆಯಲ್ಲಿದೆ.